ನನ್ನವ್ವನ ಹಡೆದೆ

ಮುಕ್ಕಣ್ಣ ಮುಗಿದಾನು ಮುಕ್ಕೋಟಿ ದೇವರು ಮಣಿದಾರು
ಅಂಥಾ ಚೆಂದುಳ್ಳ ಪ್ರೀತಿ ನಿನದವ್ವ/ ಹಡೆದವ್ವ
ಮುಳ್ಳಿಲ್ಲ ನಿನ್ನ ಮನದೊಳಗೆ//

ಹೊತ್ತು ನರಳಿದೆಯಂತೆ ಅತ್ತು ಹೊರಳಿದೆಯಂತೆ
ಅಜ್ಜಿ ಹೇಳಿದಳು ನೀನುಂಡ ಸಿರಿಬ್ಯಾನಿ/ ನನ್ನವ್ವ
ನನ್ನನೀ ಜಗಕೆ ತರುವಾಗ//

ಕುಡುಗೋಲ ತಂದು ಹೊಕ್ಕಳ ಬಳ್ಳಿಯ ಕುಯ್ದು
ನನ್ನ ಕೊಟ್ಳಂತೆ ಸೂಲಗಿತ್ತಿ ನಿನಕೈಯ್ಗೆ/ ನೋಡಿ
ನನ್ನಮೊಗವ ಮರೆತಂತೆ ನೀನು ಎಲ್ಲ ನೋವ//

ಜನುಮಾವ ಕೊಟ್ಟೆನಗೆ ಪಡೆದು ನೀ ಮರುಹುಟ್ಟು
ಹಡಿಲಿಲ್ಲ ಅಂದು ನೀ ನನ್ನ/ ಬದಲೀಗೆ
ಹಡೆದಂಗಾಯ್ತು ನಾನೇ ನಿನ್ನನಂದು//

ಜೀವದ ಹಂಗಾ ತೊರೆದು ನನಗಿಟ್ಟೆ ಪ್ರಾಣ
ಎಗ್ಗಿಲ್ಲದ ತ್ಯಾಗ ನಿನದೊಂದೇ/ ಜಗದೊಳಗೆ
ಕಯ್ಯೆತ್ತಿ ಮುಗಿವೇನು ನಿನ ಮುಂದೆ//

ಜಳಕ ಮಾಡೋ…

ರಣಬಿಸಿಲಿನಾಗೆ ಅಲೆದು ಮೈಲೀ ದೂರ
ತಂದಿವ್ನಿ ಕೊಡದಿ ಹೊಳೆನೀರ/ಜಳಕ
ಮಾಡಿ ಹೋಗೋ ನನ್ನ ದೊರೆಯೆ//
ಸೀಗೆಯ ಕಲಸಿವ್ನಿ ಹರಳೆಣ್ಣೆ ಕಾಯ್ಸಿವ್ನಿ
ಮೈಗೆಲ ಎಣ್ಣೆನೀರ ಎರಿತೀನಿ/ನಿಲ್ಲಯ್ಯ
ಬ್ಯಾಡೆನ್ನ ಬ್ಯಾಡ ಎನ್ನೊಡೆಯ//

ಸುಳಿದು ಹೋದಲ್ಲೆಲ್ಲ ಜನನೋಡಿ ನಗುತಾರೆ
ಹಳಿದು ನನ್ನ ಬಗೆಯಾಗೆ/ಕೇಳ್ತಾರೆ
ಇರಲಿಲ್ವೋ ಗರತಿ ಮನೆಯಾಗೆ? //

ತಾತ್ರದಾಗೆ ಓಡೋಗ ಬ್ಯಾಡ
ಮಜ್ಜಾನ ಮಾಡಿ ಹೊರಗೊಗೋ/ನನ್ನಿನಿಯ
ಎಲ್ಲೂ ಹೋಗೋದಿಲ್ಲ ಊರ ದನಜಾತ್ರೆ//

ಜಾತ್ರೆ ಸಿರಿಯಲಿ ನೀನು ಮಡಿಯ ಮರಿಬ್ಯಾಡ
ಈಬೂತಿ ಇರಲಿ ಹಣೆ ತುಂಬ/ಸಖನೆ
ಪರಮೇಶನ ಗುಡಿಯ ಹೋಗುವಾಗ//

ಬಾ ತಾಯೆ ಸರಸತಿಯೆ

ನಿಲಯವೇನ್ ಆಲಯವೇನ್ ನಿನಗೆ
ತಾಯಿ ಸರಸತಿಯ
ನಿಲಯದೊಳು ನಲಿದು ಬಾ
ಆಲಯದೊಳು ಉಲಿದು ಬಾ
ಪಾಮರ ನಾ ಬೇಡುತಿಹೆ
ನಾಲಿಗೆಯೊಳು ಒಲಿದು ಬಾ

ಬಾ ತಾಯೆ ಸರಸತಿಯೆ, ಸರಸಿಜಾತನ ಸತಿಯೆ
ಶ್ವೇತ ಕಮಲದಿ ನಗುತ ಕುಳಿತು
ಮಾನಸ ಮಲ್ಲಿಗೆ ಕೊರಳಲಿ ಧರಿಸಿ
ಹೊನ್ನ ವೀಣೆಯ ಪಿಡಿದು ಕಯ್ಯೊಳು
ಸೊಗಸಾದ ಸ್ವರವ ಮೀಟಿ ನನ್ನೊಳು
ಇಂಪು ನಾದವ ಹೊರಹೊಮ್ಮಿಸು ಬಾ

ಶುದ್ಧ ಶ್ರುತಿಯ ನೀನು ನುಡಿಸಿ
ಸಪ್ತ ಸ್ವರಗಳೆನಗೆ ಕಲಿಸಿ
ಅಂಧಕಾರವನೆಲ್ಲ ಅಳಿಸಿ
ಈಯುತೆನಗೆ ಎಲ್ಲ ಸಂಪದ
ಶ್ರದ್ಧೆತೈಲವನೆರೆವೆ ಮತಿಗೆ
ಜ್ಞಾನ ದೀವಿಗೆ ಬೆಳಗು ಬಾ

ಕಾಯೋ ತಂದೆ

ಭವಬಂಧದೊಳಗೆ ಬೆಂದಿರುವೆ ತಂದೆ
ತಾಳೆ ನಾನೀ ಲೋಕದ ಅಪನಿಂದೆ
ನಿನ್ನೊಲುಮೆಯೊಂದೆ ಎನಗಿಹುದೆಂದೆ

ನೀನೆ ತಂದೆ ನೀನೆ ತಾಯಿ
ನೀನೆ ಬಂಧು ನೀನೆ ಬಳಗ
ನೀನೆ ತಾರೋ ಬೆಳ್ಳಿ ಬೆಳಗ
ಅಂಧಕಾರದ ಈ ಕಾರಿರುಳಲಿ

ಏನು ಇರದ ದೀನನಾಗಿಹೆ
ಎಲ್ಲ ತೊರೆದ ಹೀನನಂತಿಹೆ
ಏಕೆ ಹೀಗೆ ಮೂಕವಾಗಿಹೆ
ಎಲ್ಲ ನೋಡಿಯು ಮೆಲ್ಲ ನಗುತಿಹೆ

ನೊಂದ ಮನಕೆ ನೀಡಿ ನಲಿವ ಸ್ಪರ್ಶ
ಬೆಂದ ಜೀವಕೆ ಕೊಟ್ಟು ಗೆಲುವ ಹರುಷ
ತೋರು ಬಾ ನಿನ್ನ ಘನ್ನ ಮಹಿಮೆಯ
ನೀಡು ಬಾ ಸಕಲ ಶುಭಪ್ರದ

ಮುತ್ತು ತರಲೇ…

ಮುತ್ತು ತರಲೇ ಮುಗುದೆ ಮೂಗುತಿಗೆ
ಮುತ್ತು ತರಲೇ
ಫಳ ಫಳ ಹೊಳೆಯುವ ಹಾಲಿನ ಮುತ್ತು
ಮಿರಮಿರ ಮಿಂಚುವ ಹೊನ್ನಿನ ಮುತ್ತು
ಅಂದದ ಚಂದದ ಚೆಲುವಿನ ಮುತ್ತು

ಮುತ್ತು ತರಲೇ ಜಮುನೆ ಜುಮುಕಿಗೆ
ಮುತ್ತು ತರಲೇ
ಮನದ ಕಡಲಿನಾಳದಿ ಮುಳುಗಿಹ ಮುತ್ತು
ಎದೆಯ ಚಿಪ್ಪಿನೊಳು ಅಡಗಿಹ ಮುತ್ತು
ಚಂದದ ಕಣ್ಣೊಳು ಮಿನುಗುವ ಮುತ್ತು

ಮುತ್ತು ತರಲೇ ತರಳೆ ಕೊರಳಿಗೆ
ಮುತ್ತು ತರಲೇ
ಅಧರದಿ ಉದುರುವ ಪ್ರೀತಿಯ ಮುತ್ತು
ಎದೆಯೊಳು ಮೊಳೆತಿಹ ಭಾವದ ಮುತ್ತು
ಬಗೆ ಬಗೆ ಬಣ್ಣದ ಕನಸಿನ ಮುತ್ತು

ಚೆಲುವಿರದ ಗೆಳತಿ

ಹುಣ್ಣಿಮೆಯ ಚಂದ್ರನಲ್ಲೂ
ಇದೆಯಂತೆ ಕಲೆ
ಮೊಡವೆಯಿದ್ದರೇನು ನನ್ನ ಪ್ರೇಯಸಿಯ
ಮುಖದ ಮೇಲೆ
ತಿಂಗಳಿಗೊಮ್ಮೆ ಬೆಳ್ಳಗೆ, ಕರ್ರಗೆ
ಬದಲಾಗುವ ಚಂದ್ರನಿಗಿಂತ
ಸದಾ ಕಪ್ಪಗಿರುವ
ನನ್ನೆದೆಯೊಡತಿಯೇ ಲೇಸು
ಸ್ವರ ಇರಬಹುದು ಇದ್ದ ಹಾಗೆ ಕಾಗೆ
ಕಾಗೆಯಲ್ಲವೇ ತಾಯಿ ಕೋಗಿಲೆಗೆ
ಅರಿತು ಬೆರೆತಿಹಳೆನ್ನ ಹೃದಯದಿ
ತೊರೆಯೆನವಳ ಇಲ್ಲ ಸಲ್ಲದ ನೆವವನೊಡ್ಡಿ

ಬದುಕು ಬೇವು-ಬೆಲ್ಲ

ಸುರಪುತ್ರರನೆ ಹಡೆದ ಕುಂತಿಗೆನಿತೊ ಯಾತನೆ
ಜಗದೇಕವೀರರ ಸತಿ ಪಾಂಚಾಲಿಗೆ ಸುಖವೆಲ್ಲಾ ದಕ್ಕಿತೆನೇ
ತಾಯ ತಲೆಕಡಿದ ಗುರುಪುತ್ರಗಿರಲಿಲ್ಲವೇ ಪ್ರೀತಿ
ಮಾತೃ ಭಕ್ತನು ಅವನು ಎಂದೇ ಪ್ರತೀತಿ

ಚಕ್ರವ್ಯೂಹದೆ ಸಿಲುಕಿದ ಬಾಲವೀರನ
ಪಿತಗೆ ಪುತ್ರಶೋಕವೇ ನಿರಂತರ
ಸಿಂಹಾಸನದಿಂದೂಡಿದ ಕಂದ
ಧ್ರುವನಿಂದು ಗಗನದಲಿ ಅಜರಾಮರ

ಶ್ರೀರಾಮಸತಿಗೆ ಹೂವಿನಾಸಿಗೆ ಇಲ್ಲ
ಜೀವನ ಪರ್ಯಂತ ವನವಾಸವೇ ಎಲ್ಲ
ಸತ್ಯವನೆ ನುಡಿದ ಹರಿಶ್ಚಂದ್ರಗೆ ಸತಿಸುತ ವಿಯೋಗ
ಸತ್ಯವಾನಗೆ ಸಾವಿತ್ರಿಯಿಂದ ಬದುಕುವ ಸುಯೋಗ

ವಿಧಿಯ ಪಗಡೆಯಾಟದಿ ದಾಳದಂತೆ ನಾವು
ಬದುಕಿದು ಸಿಹಿಯ ಬೆರೆಸಿದ ಬೇವು
ಬರಿಯ ಸುಖವನಿಲ್ಲಿ ಯಾರಿಗೂ ಕಾಣೆ
ನೋವನುಂಡು ನಗುವುದೇ  ಬದುಕು ತಾನೆ

ಪೋಗುತಿದೆ ಆತ್ಮ

ಒಂದಿನಿತೂ ಅರಿವೆಯಿಲ್ಲದೆ ಬಂದ ನಿರ್ವಾಣ ದೇಹವಿದು
ಹೀರಿ ಬೆಳೆಯಿತು ತಾಯ್ಮೊಲೆಯ ಸುಧೆಯ
ಕುಡಿದು ನಲಿಯಿತು ಗೋವಿನಮೃತ
ಇಳಿಸಿತೊಳಗೆ ಲೆಕ್ಕವಿರದ ಫಲ-ಪತ್ರೆ, ಕಾಯಿ-ಪಲ್ಲೆಗಳ
ಹೀರಿತದೆಷ್ಟೋ ಗುಂಡಿಗೆಯ ಬಿಸಿನೆತ್ತರ
ತಿಂದು ತೇಗಿತು ತುಂಡು ಮಾಂಸ ಖಂಡಗಳ

ಬಲ್ಲವರ ಮಾತ ಹಳಿದು ಸುಳಿಯಿತು ದಿಕ್ಕು ದೇಶಗಳ
ಚೆಂಡಾಡಿತು ಕೋಟೆ ಕೊತ್ತಲಗಳ ಹಿರಿಯರಸರ ತಲೆಯ
ಎಲ್ಲರ ಸೊಲ್ಲಡಗಿಸಿ ಮೇಲ್ಮೆರೆಯಿತು ಗದ್ದುಗೆಯಲಿ ಇನ್ನಿಲ್ಲದಂತೆ
ಎಳೆಯಿತೆನಿತೊ ವಸ್ತ್ರಗಳ ತನ್ನ ಕಾಮತೃಷೆಗೆ
ಲೂಟಿಗಯ್ದಿತು ಅರಮನೆಯ ವಜ್ರ ವೈಡೂರ್ಯ ಮುತ್ತು ರತ್ನಗಳ
ರಾಶಿಯಿಟ್ಟಿತು ಕಣಜದಿ ಬಡವ-ಬಲ್ಲಿದರುಣುವ ಹೊನ್ನಬೆಳೆಯ

ನೋಡಿರೈ ಕಾಲದ್ವೈಚಿತ್ರ್ಯದೊಳು ಸೊರಗಿದೊಡಲು
ಏನ ಪಡೆದರೆ ಏನುಯಾರ ಜಯಿಸಿದರೇನು
ಮರಳಿಪಡೆಯದಾಯಿತು ಮತ್ತೆ ತನ್ನದೇ ಜೀವ
ತಡೆಯದಾಯಿತು ಜೀವದೊಡೆ ಜಗ್ಗಾಡಿ ಕೀಳುತಿಹ ಆತ್ಮನ
ಕಾಣ್ವ ಭೌತಿಕವನೆಲ್ಲ ಸದೆಬಡಿದು ಪಡೆದೊಡಳು
ಹಿಡಿಯದಾಯಿತು ಮುಷ್ಟಿಯೊಳು ತನ್ನೊಡಲ ಹೊನ್ನುಸಿರ

ದೇವನು ನಾನು

ನಾನು ಎಲ್ಲಿಹೆನೆಂದು ಹುಡುಕುವ ವ್ಯರ್ಥ ಯತ್ನವೇಕೋ ಮನುಜ
ನಾನು ನಾನೇ, ನಾನಿರುವ ಕುರುಹ ಕೇಳು……………
ನಿನ್ನ ಅಡಿಗಡಿಗೆ ಸರಿ ತಪ್ಪುಗಳ ತಿಳಿಸುವ ದಾರಿಹೋಕನು ನಾನು
ಶಿಷ್ಟ ರಕ್ಷೆ ದುಷ್ಟ ಶಿಕ್ಷೆಯೆನ್ನುಡಿದ ವಾಣಿಯು ನಾನು
ನಿನ್ನ ಕರ್ಮಕೆ ಫಲವೀವೆನೆಂದವ ನಾನು
ಗೀತೆಯೋಳು ವಚನದೊಳು ಕಗ್ಗದೊಳು ನೀತಿ ಸಾರ್ದವ ನಾನು
ಜಗದ ಪಯಣಕೆ ದಿಕ್ಕು ತೋರ್ದವ ನಾನು

ಅಲೆದು ಬಳಲದಿರೆನ್ನನರಸಿ ನೀನೆಲ್ಲ ಗುಡಿಯೊಳು
ನಿತ್ಯ ನಗುವ ಹಸಿರೆಲೆಯಲೆನ್ನ ಕಾಣು
ಪರಿಮಳವ ಸೂಸುವರಳಿದ ಪುಷ್ಪದೊಳೆನ್ನ ಕಾಣು
ಮಧುವ ಹೀರುತ ನಲಿವ ಪತಂಗ ಭ್ರಮರದಿ ಕಾಣು
ಉಳಿಯು ಬಿಡಿಸಿದ ಶಿಲೆಯೊಳೆನ್ನ ಕಾಣು
ಕಾಯಕಕ್ಕೊಡ್ಡಿದ ನಿನ್ನ ದಣಿದ ಉಸಿರಿನೊಳು ಕಾಣು

ವನಸಿರಿಯ ಸಂಪತ್ತಿಯಲಿ ಸುಯ್ಯನೆ ಸುಳಿವ ಗಾಳಿಯು ನಾನು
ಹೋಮಕುಂಡದೊಳೊತ್ತಿ ಉರಿಯುವ ಅಗ್ನಿ ರೂಪನು ನಾನು
ಜನುಮದಿನದೊಳುಲಿವ ವೀಣೆ ಮುರಳಿಯ ನಾದ ನಾನು
ಸಾವಿನೊಳು ನಿನ್ನೆದುರೆ ಬಡಿವ ಮರಣ ಮೃದಂಗ ನಾನು
ನೀ ಅನುಸರಿಸುವ ತಾಳ ಮದ್ದಳೆಯೊಳು ಮೇಳೈಸಿಹೆ ನಾನು
ನೀ ನಡೆವ ನೀ ನುಡಿವ ನೀ ನೋಡ್ವ ಕ್ಷಿತಿಜದೊಳಡಗಿಹೆ ನಾನು

ಮುದ್ದು ಕಂದ

ಮುದ್ದು ಕಂದ ಅಂಗಳದಿ
ಅಡುತಿದೆ ಎಲ್ಲ ಮರೆತು
ಸಿಕ್ಕ ವಸ್ತುವೆಲ್ಲ ಅದಕೆ
ಅಂದೇ ತಂದ ಹೊಸತು ಆಟಿಕೆ

ಬೊಗಸೆಗಣ್ಣಲಿಲ್ಲ  ಯಾವ
ಕಳ್ಳತನ ಕಪಟ
ಬೊಚ್ಚ ಬಾಯಿ ಬಿಟ್ಟು
ತಾನು ನೋಡುತಿದೆ ಮೆಲ್ಲ ನಗುತ

ಕೆನ್ನೆ ಮೇಲೆ ಕಪ್ಪು ಬೊಟ್ಟು
ಕಣ್ಣಿನಲ್ಲಿ ಕಣ್ಣು ಕಪ್ಪು
ಮುಡಿಯೊಳಿರುವ ನಗುವ ಹೂವು
ನೋಡುತಿರೆ ಶ್ರೀಕೃಷ್ಣ ಚೆಲುವು

ಎಲ್ಲಿ ಹೋದವು

ಎಲ್ಲಿ ಹೋದುವೆಲ್ಲ ನಮ್ಮ ನೀತಿ ಪೇಳ್ವ ಥೆಗಳು
ಎತ್ತ ಸಾಗುತಿದೆ ಜಗ ನಮ್ಮ ನಿತ್ಯ ಪಯಣದಿ
ರಾಮ ಎಲ್ಲಿಸೀತೆ ಎಲ್ಲಿ
ರಾಮ ಭಕ್ತ ಹನುಮನೆಲ್ಲಿ
ಭರತನನುಜ ಪ್ರೇಮವೆಲ್ಲಿ

ಮಮತೆ ಮೆರೆದ ಮಂಥರೆ
ಪತಿವ್ರತೆ ಮಂಡೋದರಿ
ಮಾತೃ ಭಕ್ತ  ರಾವಣ
ಅಸುರ ಕುಲದ ವಿಭೀಷಣ
ದುಷ್ಟರಲ್ಲು ಒಳ್ಳೆ ಗುಣ

ಗೀತೆಸಾರ್ದ ಕೃಷ್ಣ ಎಲ್ಲಿ
ಕುಂತಿ ತನಯರೋದರೆಲ್ಲಿ
ಭೀಷ್ಮ ಎಲ್ಲಿ, ದ್ರೋಣರೆಲ್ಲಿ
ನೀತಿಸಾರ್ದ  ಗುರುಗಳೆಲ್ಲಿ
ಗುರುವ ಮೀರ್ದ ಏಕಲವ್ಯರೆಕೋ ಇಂದು ಕಾಣರಿಲ್ಲಿ