ಅನಘವರದ (ಕಾಗುಣಿತಾಕ್ಷರವಿಲ್ಲದ ಪ್ರಯತ್ನ)

ಕಮಲವದನ ವನಜಳನಯನ
ಗರಳಧರಶಯನ ಭವಭಯಹರಣ
ತಳಮಳ ಮನದ ಕಳವಳ ದಹನ
ಘನತಮಶಮನ ಖಳಗಣ ದಮನ

ಯ 
ಪವನಜಭಯದ  ಪದಕ  
ಯಮತನಯನ ಪರಮಸಖ
ಕದನಕಲಹ ಹನನ ಮದನಜನಕ

ಪರಮಪದ ವಸನ ವಗಢ ಮಥನ
ಅಮರಕವಚ ಜಯ ವದನ
ಜಲಜಭವತನಯನ ಪರವಶ 
ಅನಘವರದ ಅನವರತ ನಮನ

ಹರಸು ಗಣಪ

ವಂದನೆ ದೇವನೆ ಸುಗುಣಸಾಗರ ಗಣಪನೆ
ಶರಣು ನಿನಗೆ ಜಗನ್ಮಾತೆಯ ಪ್ರೇಮ ಸುತನೆ

ತಾಯ ತನುವಲಿ ಮೂಡಿ ಬಂದೆ
ತಂದೆಯೊಲವಲಿ ಮರುಜೀವ ಪಡೆದೆ
ಮಾತಾ ಪಿತರೇ ಲೋಕ ಎಂದೇ
ಅಗ್ರ ಪೂಜೆಯು ನಿನಗೆ ತಂದೆ

ಪುಟ್ಟ ಬಾಲನ ರೂಪ ಧರಿಸಿ
ಆತ್ಮಲಿಂಗವ ಭುವಿಗೆ ಇರಿಸಿದೆ
ಅಷ್ಟ ಅಸುರರ ಮೆಟ್ಟಿ ನಿಂತೆ
ವ್ಯಾಸನುಡಿದ ಭಾರತವ ಬರೆದೆ

ವಿಘ್ನನಾಶಕ ವಿಜಯ ನೀಡು
ಅಂಧಕಾರವ ದೂರ ಮಾಡು
ಬುದ್ಧಿದಾಯಕ ವಿದ್ಯೆ ಕರುಣಿಸು
ವಕ್ರತುಂಡನೆ ಅನವರತ ಹರಸು

ಕರ್ನಾಟಕ ಮಾತೆಯೇ

ಕರ್ನಾಟಕ ಮಾತೆಯೇ ನಮ್ಮೆಲ್ಲರ ದೈವ
ಸಿರಿಗನ್ನಡ ಸವಿನುಡಿಯೆ ನಮ್ಮೆಲ್ಲರ ಜೀವ ||
ಅಭಿಮಾನದ ನೆಲೆ ನಮ್ಮದು ಕಲಿವೀರರ ಬೀಡು
ಮಾಧುರ್ಯವೆ ಮೈದುಂಬಿದ ಕವಿಸಂತರ ಹಾಡು
ಗಿರಿವನಝರಿ ಜಲಪಾತದ ಶಿಲ್ಪಕಲೆಯ ನಾಡು
                                                   ||ಕರ್ನಾಟಕ||
ಒಂದಾಗುತ ಕನ್ನಡದಾ ಕೈಗಳು ನೂರಾರು
ನಾವೆಳೆಯುವ ಆ ತಾಯಿಯ ಕೂರಿಸಿ ಹೊಂದೇರು
ಎದೆಗೂಡಿನ ಗುಡಿಗುಡಿಯಲು ದೀಪವ ನಾವ್ ಉರಿಸಿ
ಬೆಳಗುವ ನಾವ್ ಆರತಿ ಜಯಘೋಷವ ಮೊಳಗಿಸಿ 
                                                   ||ಕರ್ನಾಟಕ||
ಕನ್ನಡದ ಹೆಮ್ಮರಕೆ ನಾವುಗಳೇ ಹೊಸ ಚಿಗುರು
ಕರುನಾಡಿನ ಆಳದಲಿದೆ ನಮ್ಮಯ ತಾಯ್ ಬೇರು
ಸೊಗಸೂಸುತ ತಾನರಳಲಿ ಕನ್ನಡದ ನವಕುಸುಮ
ಶಿರಬಾಗುತ ರಾಜೇಶ್ವರಿ ನಿನಗೆ ನಮಿಪೆವಮ್ಮ
                                                   ||ಕರ್ನಾಟಕ||

ಯಾಕೆ ದೂರವಾದೋ ತಂದೆ

ಯಾಕೆ ದೂರವಾದೋ ತಂದೆ ಪೊರೆಯದೆನ್ನನು ನೀನು
ಶೋಕಸಾಗರದಲೆನ್ನ ನೂಕಿ ಮರೆತುಹೋದೆ

ಧನಕನಕಗಳ ಬಯಸಿ ಬೇಡುವನಿವನೆಂದೇ
ಮನಕಾಮನೆಗಳನೆಲ್ಲ ಮುಂದಿಡುವನೆಂದೇ
ಜನಕನಂತೆ ಎನ್ನ ಪೊರೆಯಬೇಕಾದವನೇ
ನೆನಹು ಬಾರದೇ ನಿನ್ನ ನಂಬಿ ನಿಂತವನದು

ಶಿರವ ಬಾಗುವೆ ಎನ್ನ ಪಾಪಗಳ ಪರಿಹರಿಸು
ವರವ ಕರುಣಿಸಿ ಹರಸು ಸರಿದಾರಿಯಲಿ ನಡೆಸು
ತರವಲ್ಲ ಪಾಮರನ ಕಡೆಗಣಿಸಿ ನಡೆಯುವುದು
ಕರಪಿಡಿದು ನಡೆಸು ವಾಸುದೇವನ ಸುತನೆ

ಆರ ಭಯವು ನಿನಗೆ ಶ್ರೀರಾಮಚಂದಿರನೆ

ಆರ ಭಯವು ನಿನಗೆ ಶ್ರೀರಾಮಚಂದಿರನೆ
ಪರಮ ಪುರುಷೋತ್ತಮ ಕೌಸಲ್ಯಸುತನೇ

ಧನುವೇರಿಸಿದನುಜನು ಸನಿಹದಲಿರುತಿರಲು
ಆನುಸರಿಸಿ ನಡೆವ ಅಭಿಮಾನಸತಿಯಿರಲು
ಹನುಮ ಕಾದಿರಲು ವಿನಯದಿ ನಿನ್ನಾಣತಿಗಾಗಿ
ಅನುಗಾಲ ಮುನಿಜನರು ಹಾರೈಸುತಿರಲು

ಆರುಕಾಯುವರಿಲ್ಲ ಅಜ್ಞಾನಿ ನಾನಿಲ್ಲಿ
ಪಾರು ಮಾಡಯ್ಯ ಭವಭಯವ ಬಿಡಿಸಿ
ಬೀರು ಕರುಣೆಯ ಸ್ವಾಮಿ ಲೋಕಾಂತರಂಗ
ತೋರುತಭಯವ ಸಲಹು ಶ್ರೀಪತಿಯೆ ರಾಘವನೆ

ಮದ್ದಾನೆ ಬಂದಿಳಿದು

ಮದ್ದಾನೆ ಬಂದಿಳಿದು ಮನದ ಬಯಲಿನಲಿ
ಗುದ್ದಾಡಿ ಇದ್ದುದೆಲ್ಲವ ತುಳಿದು ತೀರಿಸುತಿದೆ
ಮುದ್ದಾದ ಗೋವಿಂದ ತ್ವರಿತದಲಿ ಬಾರೊ
ಖುದ್ದಾಗಿ ಮತ್ತೇರ್ದ ಮಾತಂಗಕಂಕುಶವನಿಡಿದು

ಎತ್ತರೆತ್ತರ ಬೆಳೆದಿದ್ದ ಪ್ರೀತಿ ಸ್ನೇಹಗಳು
ತತ್ತರಿಸಿ ಉರುಳುತಿವೆ ಆಯತಪ್ಪಿ
ಒತ್ತರಿಸಿ ನಿಂತ ನಮ್ರ ನಂಬುಗೆಯನೆಲ್ಲ
ಎತ್ತಲೋ ದೂರಕ್ಕೆ ಕಿತ್ತೊಗೆಯುತಿದೆ ಸೊಕ್ಕು

ಮದ ಯಾವ ಮಾಯದಲಿ ಹೊಕ್ಕಿತೋ ನಾಕಾಣೆ 
ಕದಮುರಿದು ತಿಳಿಯಾದ ಮನಸಿನೊಳಗೆ
ಇದರೊದೆತ ಅತಿಯಾಯ್ತು ಬಾರಯ್ಯ ತಂದೆ
ಹದಗೊಳಿಸೆನ್ನ ಮನವ ಮೊದಲಿನಂತೆ

ಇಷ್ಟು ನಿಷ್ಠುರವೇಕೆ

ಇಷ್ಟು ನಿಷ್ಠುರವೇಕೆ ಕಷ್ಟದೊಳು ಕಡೆಗಣಿಸಿ
ದೃಷ್ಟಿಯನೆತ್ತಲೋ ನೆಟ್ಟು ನಿಂತಿರುವೆ ದೇವಾಧಿದೇವ?

ಪಟ್ಟು ಸಡಿಲಿಸು ತಂದೆ ದಿಕ್ಕೆಟ್ಟು ಬಂದಿರುವೆ
ಕೆಟ್ಟು ಜಗದೊಳು ನಾನು ನಿನ್ನನೇ ನಂಬಿರುವೆ
ಅಟ್ಟು ಚಿಂತೆಯನೆಲ್ಲ ಬಾಳಿನಾಚೆಯ ತಟಕೆ
ಬಿಟ್ಟು ಬಾಳೆನು ನಿನ್ನ ನಾಮಾಮೃತವನು

ಮುನಿಯುವುದು ತರವೇ ಅರಿಯದಾತನ ಮೇಲೆ
ಹನಿಗರುಣೆಯಿಟ್ಟರೂ ಕರಗುವುವು ದುರಿತಗಳು
ಕನಿಕರದಿ ಕಾಪಾಡು ಇರಿಸಿ ನಿನ್ನಯ ಕೃಪೆಯ
ನೀನಿರದೆ ತೃಣವಿದೀ ಬದುಕು ಕರುಣಾಳು ಪ್ರಭುವೇ

ಪಂಥವೇನುಂಟು

ಪಂಥವೇನುಂಟು ನನ್ನೊಡನೆ ನಿನಗೆ
ಹೇಳಯ್ಯ ಸಿರಿದೊರೆಯೆ... ನಾನಂತು ಅರಿಯೆ

ಸಿಹಿಯಾದ ನೊರೆಹಾಲ್ಗಡಲಿನಲಿ ಮೊರೆವ
ಜೋಗುಳವನಾಲಿಸುತ ನೀ ಒರಗಿ
ಭವಲೋಕದೊಳಗೆನ್ನ ತೊರೆದು ಕಾಡಿಸುತಿರುವೆ

ಹಿರಿದಾದ ಅಖಿಲಾಂಡಲೋಕವನು ಪೊರೆದು
ಸಿರಿವರನೆ ಸಂಭ್ರಮದಿ ನೀ ನಿರುತ
ಇಹಬಂಧನದೊಳೆನ್ನ ಇರಿಸಿ ನೋಡುತಲಿರುವೆ

ಸಮನೇನು ನಾನಿನಗೆ ದೇವದೇವರದೇವ?
ಇಂತೇಕೆ ಪಂಥವಿದು ಶ್ರೀಕಾಂತ ನನ್ನೊಡನೆ?
ಆಂತರ್ಯದೊಳಗೆಲ್ಲ ನಿನ್ನನೇ ಸ್ಮರಿಸಿರುವೆ
ನಿಂತು ಕಾಯೋ ಪ್ರಭುವೆ... ವೇದಾಂತ ವಿಭುವೆ...

ನೇಸರನುದಯ

ನೋಡದೋ ದೂರ ದಿಗಂತದಂಚಿನಲಿ
ನೇಸರನುದಯಿಸುತಿಹ
ಬಂಗಾರದುಂಗುರಕೆ ರಾಗರಶ್ಮಿಯ
ಹೊಳಪ ಮೈದುಂಬಿ ಮೆರೆದು

ಸಹಸ್ರ ರತ್ನರಾಗ ರಶ್ಮಿ
ಹೊಮ್ಮಿ ಚಿಮ್ಮಿ ಹರುಷದಿ
ಮೂಡುತಿರುವ ಭಾಸ್ಕರನು
ತಾಮಸ ತಾನಳಿಸೆ ಜಗದಿ

ತಿರೆಯನಾಳ್ವ ತಿಮಿರ ತೊಡೆಯೆ
ಹೊನ್ನ ತೇಜ ನಗುತಿಹ
ತಮದ ಗಾಢ ಹೊನಲನಳಿಸೆ
ತವಕದಲ್ಲಿ ಬರುತಿಹ

ಬೊಕ್ಕತಲೆ

ಬೊಕ್ಕತಲೆಯ ಬೋಳುಮಂಡೆ
ಚೊಕ್ಕವಾಗಿ ಹೊಳೆದಿದೆ
ಮಳೆಯು ಬಂದು ಸಾಪುಗೊಂಡ
ಬಂಡೆಯಂಥ ನುಣುಪಿದೆ

ಕರಿಯ ಬಿಳಿಯ ಎಳೆಯ ಹಳೆಯ
ಒಂದು ಕೂದಲಿಲ್ಲದೆ
ಬಸಿಲಿನಲ್ಲಿ ಪ್ರತಿಫಲಿಸುವ
ಗುಮ್ಮಟವ ಹೋಲುತಿದೆ

ಕೇಶವಿರದ ಮಂಡೆಯೇನು
ತನ್ನೊಡೆಯನ ಹಳಿವುದೇ...?
ಯಾರೆ ಬರಲಿ ಎಂದಿನಂತೆ
ಹೊಳೆವ ನಗುವ ಚೆಲ್ಲಿದೆ

ಬೆಳಕಿದೇಕೆ ಬಾಡಿದೆ

ಬೆಳಕಿದೇಕೆ ಬಾಡಿದೆ...?
ಹೊಸಕಿರಣವ ಸೂಸದೆ

ಮಬ್ಬು ಮಸುಕು ಬಯಲಿನಲ್ಲಿ
ಹೊಸಹುರುಪನು ತಾರದೆ
ಕಪ್ಪಡರಿದ ಜಗದ ಒಡಲ
ಕಾರ್ಗತ್ತಲ ಸೀಳದೆ

ಶಕ್ತಿಯೆಲ್ಲ ಉಡುಗಿದಂತೆ
ಸೋತು ಸೊರಗಿ ಬಿದ್ದಿದೆ
ಕೊಡವಿ ಎದ್ದು ಹೊಳೆಯದೇನೆ
ಮಂಕು ಕವಿದು ಕುಳಿತಿದೆ

ಕರಿನೆರಳಲಿ ಮರೆಯಾದ
ಸತ್ವ ತೆರೆದು ತೋರದೆ
ಕೋರೈಸುವ ಕಾಂತಿ ಬೀರಿ
ನಗುತ ಮಿಂಚಿ ಮಿನುಗದೆ

ಭರವಸೆಯ ಹಕ್ಕಿ

ಮುರಿದು ಬಿದ್ದ ಗೂಡ ತೊರೆದು
ಹಕ್ಕಿಯೊಂದು ಹಾರಿದೆ
ತೆರೆದ ಬಾನ ದಿಟ್ಟಿಸುತ್ತ
ನೂರು ಕನಸ ಕಂಡಿದೆ

ಹೊಸಬಾಳಿನ ಹೊಂಗನಸು
ಮನದಾಳದಿ ಮೂಡಿದೆ
ಭರವಸೆಯ ಹೊಸ ಮುಗಿಲು
ಬಾಂದಳದಿ ತೇಲಿದೆ

ನವಜೀವನ ಕಟ್ಟಿಕೊಳಲು
ಹಕ್ಕಿ ತಾನು ಹೊರಟಿದೆ
ನೋವು ದುಃಖ ದುಗುಡಗಳ
ತೂರಿ ಮೇಲೆ ಹಾರಿದೆ

ಬತ್ತಿದೆ ಕೆರೆ

ಎಂಥಾ ಸಿರಿ ಇತ್ತು ನೀರಿನ ಸೆಲೆ ಇತ್ತು
ಹಸಿರಿನ ಚೆಲುವರಳಿ ಊರೆಲ್ಲ ನಗುತಿತ್ತು

ಸಿಹಿನೀರ ಕೆರೆಯೊಂದು ಊರ ಮಗ್ಗುಲಲಿತ್ತು
ಹೋಗಿಬರುವವರಿಗೆ ತಂಪನೆರೆಯುತಿತ್ತು
ಬಾಯಾರಿ ಬಳಲಿದ ಜನಜಾನುವಾರಿಗೆ
ತನ್ನೊಡಲ ಸೀನೀರ ಕರೆದು ಕುಡಿಸುತಿತ್ತು

ಈಗೆಲ್ಲೋ ಕಾಣದು ಕೆರೆ ಎಂದೋ ಬತ್ತಿಹುದು
ಬಳಲಿ ಬಂದವರೆಲ್ಲ ಬಾಯಾರಿ ನಿಂದವರೆ
ಸಿಹಿನೀರ ಕೆರೆಯ ಮನದೊಳಗೆ ನೆನೆದವರೆ
ನೀರಿಲ್ಲದ ಊರಲ್ಲಿ ಕಣ್ಣೀರ ಕರೆದವರೆ

ಅವ್ವ ನೆನಪಾದಳು

ನಡುಮನೆಯ ಒಳಕಲ್ಲು ಗುಡುಗುಡಿಸಿ
ಅರೆವ ಖಾರ ಘಮಗುಡಲು
ಅವ್ವ ನೆನಪಾದಳು

ತುಂಬಿದ ಬಿಂದಿಗೆಯ ನೆತ್ತಿಯ ಮೇಲೊತ್ತು
ತುಂಬುಗಂಭೀರದಲಿ ಹೆಣ್ಣೊಂದು ಬರುವಾಗ
ಅವ್ವ ನೆನಪಾದಳು

ತೂಗು ನೆಲುವಿನ ಮೇಲೆ ಬೆಲ್ಲ ಬೆರೆಸಿದ ಹಾಲು
ಕಿರುಮನೆಯ ಒಳಗೆಲ್ಲ ನರುಗಂಪು ಬೀರಿರಲು
ಅವ್ವ ನೆನಪಾದಳು

ಮಜ್ಜಿಗೆಯ ಕಡೆಗೋಲು ಹೊಸಮಡಕೆಯ ಮೊಸರಲ್ಲಿ
ಬೆಳ್ನೊರೆಯ ಚಿಮ್ಮಿಸುತ ಹಸಿಬೆಣ್ಣೆ ತೆಗೆದಿರಲು
ಅವ್ವ ನೆನಪಾದಳು

ನೆತ್ತಿಗೊತ್ತಿದ ಬೆಚ್ಚಗಿನ ಹರಳೆಣ್ಣೆ ಜಿನುಜಿನುಗಿ
ಹನಿಯಾಗಿ ನೊಸಲ ಮೇಲಿಳಿದಿರಲು
ಅವ್ವ ನೆನಪಾದಳು

ಮುಂಬಾಗಿಲ ಹೊಸಿಲಲ್ಲಿ ಹಸನಾದ ರಂಗೋಲಿ
ಅಂಗಳದ ತುಂಬೆಲ್ಲ ನಸುನಗುತ ಅರಳಿರಲು
ಅವ್ವ ನೆನಪಾದಳು

ಮುಸ್ಸಂಜೆಯ ಮಸುಕಲ್ಲಿ ಅಚ್ಚೆಳ್ಳೆಣ್ಣೆಯ ಸೊಳ್ಳು
ನಭದೆಡೆಗೆ ಮೊಗಮಾಡಿ ತಲೆಯಿತ್ತಿ ಉರಿವಾಗ
ಆದಿಶಕ್ತಿ… ಅನಂತಶಕ್ತಿ… ಅಗಾಧಶಕ್ತಿ…
ಅವ್ವ ನೆನಪಾದಳು… ನನ್ನವ್ವ ನೆನಪಾದಳು

ದಣಿದ ವೀಣೆ

ಏಕೆ ದಣಿದಿದೆ ವೀಣೆ ದನಿ
ಇದೇಕೆ ಜಾರಿದೆ ಕಣ್ಣ ಹನಿ

ಯಾವ ನೆನಪು ಕಾಡುತಿದೆ
ಏಕೆ ಕಣ್ಣು ತೋಯುತಿದೆ
ಯಾವ ಮಾತು ಹೊರಡದೆ
ತುಟಿಯಂಚಲೆ ತಡೆದಿದೆ

ಶೋಕರಾಗ ಮಿಡಿದು ಹೃದಯ
ತನಗೆ ತಾನೇ ಬೇಯುತಿದೆ
ಮೂಕವೇದನೆ ತುಂಬಿಬಂದು
ಎದೆಯ ಭಾವ ನರಳುತಿದೆ

ಇಂಪಾದ ದನಿಯೊಡೆದು
ಏಕೆ ಕಂಠ ಬಿರಿದಿದೆ
ಬಿಸಿಮೌನದ ತಾಪಕೆ
ಉಸಿರು ಭಾರವಾಗಿದೆ

ಕೇಳುತಿರಲಿ ನಿನ್ನ ದನಿಯು…

ಮಬ್ಬು ಬೆಳಗು ಹರಿಯುವಾಗ
ಇಬ್ಬನಿಹನಿ ಕರಗುವಾಗ
ಹಕ್ಕಿಗಾನ ಉಲಿಯುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಸಂಜೆ ಕಡಲು ಮೊರೆಯುತಿರಲು
ಅಲೆಯು ಬಳುಕಿ ಆಡುತಿರಲು
ಮೈಯ ಮರೆತು ನೋಡುತಿರಲು
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಇರುಳು ಚಂದ್ರ ಹೊಳೆಯುವಾಗ
ತಾರೆ ಮಿಂಚಿ ಮಿನುಗುವಾಗ
ಮೆಲ್ಲ ಗಾಳಿ ಬೀಸುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಮಡಿಲಿನಲ್ಲಿ ತಲೆಯನಿಟ್ಟು
ಕನಸಿನಲ್ಲಿ ತೇಲುವಾಗ
ಯಕ್ಷಲೋಕ ಗಾನದಂತೆ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಒಂಟಿ ಯಾನ ಮಾಡುವಾಗ
ತುಂಟ ನೆನಪು ಮೂಡಿ ಬಂದು
ಮುಗುಳು ನಗೆಯು ಮೂಡುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಮೂಡಲ ಸೀಮೆಗೆ ಮಳೆಯಾಯ್ತು

ಮೂಡಲ ಸೀಮೆಗೆ ಮಳೆಯಾಯ್ತು ನೋಡು ಬಾರೊ ಅಣ್ಣಾ
ಬೆಟ್ಟಗುಡ್ಡಗಳು ನಕ್ಕುನಗುತಾವೆ ಹೊತ್ತು ಹಸಿರು ಬಣ್ಣ

ಸೂರುಸೂರಿನ ಅಂಚಲ್ಲಿ ಮುತ್ತಿನಹನಿಗಳು ತೂಗಾಡಿ
ಬೊರೆಮೇಲಿನ ಹೊಸನೀರು ಹಳ್ಳಕೊಳ್ಳದಲಿ ಬಳುಕಾಡಿ
ಊರಮುಂದಿನ ಓಣಿಯಲಿ ತುಂಬಿಹರಿದಾವು ಕೆರೆಕೋಡಿ

ಮೂಡಲ ಸೀಮೆಯ ಬಯಲೆಲ್ಲ ಮಳೆಬಂದು ತಣಿಲಾಯ್ತು
ಮರಮರವೆಲ್ಲ ಚಿಗುರೊಡೆದು ನೆಲಕೆಲ್ಲಾ ನೆಳಲಾಯ್ತು
ಹಚ್ಚಹಸಿರಿನ ಮರದಲ್ಲಿ ಕೋಗಿಲೆಕಂಠ ಕೊಳಲಾಯ್ತು

ದೇವ ದೇವಿಯರ ಗುಡಿಯಲ್ಲಿ ಗಂಟೆ ಜಾಗಟೆ ಮೊಳಗಿದವೋ
ತೇರಬೀದಿಯ ತುಂಬೆಲ್ಲ ತರತರ ಹೂಗಳು ಘಮ್ಮೆಂದೋ
ಹಟ್ಟಿಹಟ್ಟಿಯ ಹೊಸಿಲಲ್ಲಿ ಸಾಲು ದೀಪಗಳು ಬೆಳಗಿದವೋ

ಮಾಗಿಯ ಚಳಿ

ಈ ಮಾಗಿಯ ಚಳಿಯೆ ಹೀಗೆ:
ಅವಳ ಮುಡಿಜಾರಿದ ಮಲ್ಲಿಗೆಯ ಘಮಲನ್ನು
ತೀಡಿ ತಂದ ಮಾಗಿಯ ಕುಳಿರ್ಗಾಳಿ
ಕಚಗುಳಿಯಿಟ್ಟು ಬೆಳ್ಳಂಬೆಳಗ್ಗೆ ಮತ್ತೇರಿಸುತಿದೆ

ಅವಳ ಕಡೆಗಂಬದ ಸೊಂಟ ಬಳಸಿದ
ನನ್ನ ಕೈ ಬಿಡಲೊಲ್ಲದು
ನನ್ನ ತೋಳತೆಕ್ಕೆಯಲ್ಲಿ ಮುದುಡಿದ ಅವಳ ಮುಖ
ಸೂರ್ಯ ನೆತ್ತಿಗೆ ಬಂದರೂ ಅರಳಲೊಲ್ಲದು

ಕುಳಿರ್ಗಾಳಿ ಬೀಸಿದಂತೆಲ್ಲಾ ಬಿಗಿದಪ್ಪುವ ಅವಳು
ಎದೆಗೂಡಿನಲಿ ಬಚ್ಚಿಟ್ಟು ಬಿಸಿಯೀವ ನಾನು
ಈ ಮಾಗಿಯ ಚಳಿಗೆ ನಿಗಿಕೆಂಡವೂ ಬಿಸಿತಾರದು
ಮಾಗಿ ಬರಲು ಮೈ ಮುದುಡಿದೆ ಮನ ಅರಳಿದೆ 

ಕಾರ್ಮಿಕರು

ಕಾರ್ಮಿಕರಿವರು ಕಾರ್ಮಿಕರು
ದೇಶದೇಳಿಗೆಗೆ ಶ್ರಮಿಸುವ ಶ್ರಮಿಕರು
ಮೈಯ್ಯನು ಮುರಿದು ನಗುತಲಿ ದುಡಿದು
ಪ್ರಗತಿಯ ತರುವ ನಾವಿಕರು

ಸುಳ್ಳನಾಡದೆ ಕದ್ದು ಓಡದೆ
ಬೆವರನು ಹರಿಸಿ ದುಡಿವವರು
ಕೇಡನು ಬಯಸದೆ ದ್ರೋಹವ ಬಗೆಯದೆ
ನಂಬಿಕೆ ಗಳಿಸಿ ಗೆಲುವುದ ಬಲ್ಲರು

ದುಡಿಮೆ ಎನ್ನುವ ದೇವರ ದೀಪಕೆ
ಪರಿಶ್ರಮ ತೈಲವನೆರೆಯುವರು
ಕ್ರಾಂತಿಯ ಬೆಳಕನು ನಾಡಿಗೆ ತರುವ
ಕಾಯಕ ಮಾರ್ಗದ ಯೋಗಿಗಳು

ಛಲಗಾತಿ

ಅವ್ವ ಮುದ್ದೆ ಮಾಡುವ ಪರಿಯ ನೋಡಬೇಕು
ಹಿಡಿದ ಕೆಲಸವ ಬಿಡದೆ ದುಡಿವ ಅವಳ ಛಲವ ನೋಡಬೇಕು
ಮಡಕೆಯ ಬಾಯಿಗೆ ಕವಗೋಲು ಸಿಕ್ಕಿಸಿ
ಕೋಲಿನಲ್ಲಿ ಹಿಟ್ಟು ತಿರುವಿ ಕಟ್ಟಿದ ಗಂಟುಗಳ ಪುಡಿಮಾಡುವುದ

ಅಂದು ನಾನು ಕನಸ ಕಂಡಿದ್ದೆ: 
ಅವ್ವನಂತೆ ನಾನೂ
ಈ ಜಗಕ್ಕಂಟಿದ ಜಾಡ್ಯದ ಗಂಟುಗಳನ್ನೆಲ್ಲ ತೊಡೆದು ಬಿಡುವೆನೆಂದು
ಅವ್ವ ಛಲಗಾತಿ ಹಿಡಿದ ಕೈಂಕರ್ಯವ ಬಿಡದೆ ಕೊನೆವರೆಗೂ ನಡೆಸಿದಳು
ಇಂದು ಮಾಡಿದ ಮುದ್ದೆಯೂ
ಅದೇ ಹದ… ಅದೇ ನುಣುಪು… ಅದೇ ಗಾತ್ರ… ಒಂದೂ ಗಂಟಿಲ್ಲ

ನಾಚಿಕೆಯಾಗುತ್ತಿದೆ ನನಗೆ...
ಬದುಕುವಾಸೆಗೆ ನಾನೂ ಜಗದ ಜಾಡ್ಯದ ಗಂಟಾಗಿಬಿಟ್ಟೆನೆಂದು
ಭಯವಾಗುತ್ತದೆ ಆ ಛಲಗಾತಿ ಹಿಟ್ಟಿನ ದೊಣ್ಣೆಯೊಡನೆ ಬಂದು
ನನ್ನನ್ನು ಹೊಸಕಿಬಿಡುವಳೋ ಎಂದು

ಬದುಕಿನ ಬಣ್ಣ

ಎಂತೆಂತಹ ಬಣ್ಣಗಳು ನಮ್ಮ ಬದುಕ ಚಿತ್ರದಲಿ
ಮಾಸದಂತೆ ಉಳಿದಿವೆ ನನ್ನ ಮನದ ಭಿತ್ತಿಯಲಿ

ಬರಿಯ ಬಿಳಿಯಪರದೆ ನನ್ನ ಬಾಳು ನೀನಿರದೇ ಅಂದು
ಏಳೇಳು ವರ್ಣಗಳು ಮೇಳೈಸಿವೆ ಇಂದು
ನೀ ಬಂದ ದಿನದಂದು ಬದುಕೆಲ್ಲ ಹಸಿರು
ಕಡುನೀಲಿ ಕನಸಿನಲು ನಿನ್ನದೇ ಹೆಸರು 

ಮೋಹಕ ತಿಳಿನೀಲಿಯ ನಗೆಯ ನೀನು ಸೂಸಿರಲು
ಕೆನ್ನೀಲಿಯ ಅಮಲಿನಲಿ ನಿನ್ನ ನಾನು ಸೇರಿರಲು
ಜಗವೆಲ್ಲ ಕೆಂಪೇರಿ ನಮ್ಮ ನೋಡಿ ನಗುತಲಿತ್ತು
ಮುಚ್ಚಿದ ಕಡುಗಪ್ಪನು ಒಲವ ಬೆಳಕು ಓಡಿಸಿತ್ತು

ಸಂತಸದ ತೆಳುಹಳದಿ ಮನದ ತುಂಬ ಮಿನುಗಿತ್ತು
ನಿನ್ನ ನನ್ನ ಧೃಡ ಶಕ್ತಿ ಕೇಸರಿಯನು ತೋರಿತ್ತು
ಎನಿತು ರಂಗು ಪಡೆದ ಬದುಕು ನಮ್ಮ ಜೀವನವು
ಭಾವದೊಡಲ ನಮ್ಮ ಮನಕೆ ಬಣ್ಣಗಳ ಬಂಧನವು

ದೃಷ್ಟಿ

ಅಡುಗೆಮನೆಯ ಕಪ್ಪು ಕತ್ತಲಲ್ಲಿ
ನನ್ನವ್ವ ನನಗೆ ದೃಷ್ಟಿ ತೆಗೆದಿದ್ದಳು
ಜಗದ ತಾಯ್ತನವೆಲ್ಲ ಸೇರಿ
ಇಡೀ ಸೃಷ್ಟಿಗೇ ದೃಷ್ಟಿ ತೆಗೆದಂತೆ

ಉರಿಯೊಲೆಯ ಮೇಲಿದ್ದ ಪಾತ್ರೆಯ ತಳದ
ಕರಿಮಸಿಯ ಬೊಟ್ಟಿಟ್ಟು ಹಣೆಗೆ...ಗಲ್ಲಕೆ...
ಅದು ಸಾಲದು, ಅವಳ ಕಂದನ ಚಂದಕ್ಕೆ…!
ಬಳಿಯಿದ್ದ ಕಸಬರಿಕೆಯ ಕಡ್ಡಿಗಳಿರಿದು
ಉರಿಬೆಂಕಿಗೆ ಸೋಕಿಸಿ ನೀವಾಳಿಸಿ
ಸಿಡಿದ ಕಡ್ಡಿಯ ಸದ್ದಿನ ಜೊತೆ ತಾನೂ ಬಡಬಡಿಸುತ್ತಿದ್ದಳು
ಸದ್ದಿಗೊಂದರಂತೆ ಬೈಗುಳ ಹಾಕಿ
ಕಣ್ಣು ತಗುಲಿಸಿದವರ ಶಪಿಸುತ್ತ

ಕತ್ತಲ ಮನೆಯ ಮೂಲೆ ಮುಡುಕುಗಳಿಗೆ ಕಣ್ಣಾಯಿಸದೆ
ಖಾತ್ರಿಯಿಂದ ಸಾಮಾನು ಡಬ್ಬಗಳನ್ನು ತೆಗೆಯುವ ಅವಳೆಷ್ಟು ಜಾಣೆ
ಕೈತಪ್ಪಿ ಬದಲಿ ಡಬ್ಬ ತೆಗದದ್ದು ಒಂದುದಿನವೂ ಕಾಣೆ..!
ಹಾಗೆ ತೆಗೆದ ಖಾರದ ಮಯ್ಯ ಕೆಂಪು ಮೆಣಸಿನಕಾಯಿ
ನೆನ್ನೆಯಷ್ಟೇ ಕೆಂಡವಾಗಿದ್ದ ಕಾಲ ಕೆಳಗಿನ ಕರಿಯ ಇದ್ದಿಲನ್ನು
ಮುಷ್ಟಿಯೊಳು ಹಿಡಿದು ನನ್ನಿಂದ ಥೂ... ಎನಿಸುತ್ತಿದ್ದಳು
ಸೆರಗಂಚಿನ ತುದಿಯು ನೆತ್ತಿಯಿಂದ ಪಾದವನ್ನು ಮುಟ್ಟಿಸುತ್ತಿತ್ತು
ನನ್ನ ತುಂಬುಗೆನ್ನೆಯ ಸವರಿದ ಅವಳ ಬೆರಳುಗಳು ನೊಟಕೆ ಮುರಿಯುತ್ತಿದ್ದವು

ತನ್ನ ಜೀವಮಾನವೆಲ್ಲ ಸವೆಸಿದ
ಕಗ್ಗತ್ತಲ ಅವಳ ಅಡುಗೆ ಮನೆಯ ಪ್ರಪಂಚದಲ್ಲಿ
ನಾನು ಕಣ್ಣಗಲಿಸಿ ನೋಡಿದಾಗ ಕಂಡದ್ದು:
ಕಿಟ್ಟ ಕಟ್ಟಿದ ಗೋಡೆಗಳು, ಅರ್ಧ ಉರಿದ ಸೌದೆ,
ಕಂಟು ವಾಸನೆ ಬೀರುವ ನೆಲಕ್ಕೆ ಚೆಲ್ಲಿದ ಬಸಿದ ಗಂಜಿ
ಸುತ್ತಿಕೊಂಡ ಹೊಗೆ, ಪೇರಿಸಿಟ್ಟ ಕಪ್ಪಾದ ಮಡಕೆಗಳು
ಮತ್ತು ನೀರೊಸರಿ ಕೆಂಪಾದ ಅವ್ವನ ಕಣ್ಣು
ಅವಳು ಕಂಡದ್ದು ಮಾತ್ರ ಬರೀ ನನ್ನ ಕಣ್ಣ ಬೆಳಕು…

ಕೂಡಿ ನಡೆವ ತವಕ

ನೀನಿಂದು ಕೇಳು… ಒಳಮನದ ಹಾಡು…
ಬಾ ಬಂದು ಸೇರು… ನನ್ನೆದೆಯ ಗೂಡು…
ನಾಕಂಡ ಕನಸು… ನೀನಿರಲು ನನಸು
ನೀನಾದೆ ಇನಿಯ… ಈ ಮನದ ಸೊಗಸು
ಕನಸು ಮನಸನೆಲ್ಲ ಆವರಿಸಿ… ಮತ್ತೆ ಮೂಡುತಿಹೆ ನೀನೆ ಅವತರಿಸಿ…

ಜೀವನದ ಹಾದಿಯಲಿ, ನಿನ್ನ ಕೂಡಿ ನಡೆವ ಒಂದೇ ತವಕ...
ಸಾಗುತಿಹ ದಾರಿಯಿದು, ಬೇರಾಗದಿರಲಿ ಕೊನೆಯ ತನಕ…
ಜೋಡಿಜೀವದ ಒಂದೆ ಗುರಿಯ, ಸೇರಿ ತಲುಪುವ ಬಾರೊ ಗೆಳೆಯ…
ಮನಸಿನೊಳು ಮೂಡುತಿರುವ, ಕಣ್ಣೆದುರು ಕಾಣದಿರುವ…
ಕನಸಿನ ಚಿತ್ರಕೇ… ಕುಂಚ ಹಿಡಿದು… ಬಣ್ಣ ಬಳಿಯಲು... ಬೇಗ ಬಂದು ಸೇರೋ...

ಈ ಹಾದಿಯೆ ಹೀಗೇ, ನೆಲಬಿರಿದಾ ಹಾಗೇ.. ಹೇ…
ಬಿರುಬಿಸಿಲಿನ ರವಕೆ, ಅಡಿಯಿಡದ ಹಾಗಿದೆ...
ಬರಿಮುಳ್ಳಿನ ಮೊನೆಯೇ... ಜೀವನ ಪಥದೇ...
ಪಯಣದ ತುದಿಯನು ಅರಿಯದೇ ತವಕಿಸಿ...
ಬದುಕಿದು ಬಯಲಲಿ ದಿಕ್ಕೆಟ್ಟು ನಿಂತಿದೇ...

ನಿನ್ನ ನೆನೆದರೆ ನನ್ನೊಳಗೇ, ಒದಗಬಲ್ಲದೇ ಸಾಂಗತ್ಯ?
ನಿನ್ನ ಬರವಿಗೆ ಕಾದಿರುವೆ, ಬಂದು ನೀಡುವೆಯ ಸಾಮೀಪ್ಯ?
ಕೊನೆ-ಮೊದಲಿಲ್ಲದ ದಾರಿಯಿದು, ನೂರು ಮೀರಿದಾ ಕವಲುಗಳು
ಗುರಿಯನು ತಲುಪುವ ಓಟವಿದು, ವೃತ್ತಪಥಗಳ ತಿರುವುಗಳು

ಶೃತಿಯಿರದ ಗಾನದಲಿ... ಹಿತವಿಲ್ಲ ನೋಡು ನಿನ್ನಾ ಮರೆತು
ಹಾಡುವ ಬಾ ನಲಿಯುತಲಿ... ಸ್ವರಾತಾಳದೊಡನೆ ನಾವೂ ಕಲೆತು
ಮೂಕಹಕ್ಕಿಯು ನೇಯುತಿರುವ, ಬಾಯಿತೆರೆದು ಹಾಡದಿರುವ
ಸಹಜತೆಗೂ ಮೀರಿರುವ, ಕಲ್ಪನೆಗೂ ನಿಲುಕದಿಹ
ಒಲವಿನ ಗೀತೆಗೇ... ಭಾವ ಮಿಡಿದು ರಾಗ ಬೆಸೆದು ಹಾಡು ಬಾರೋ ಬೇಗಾ...

ಕಲಾಂ ನಮನ

ಭಾರತಮಾತೆಯ ಕೀರ್ತಿ ಕಳಸ
ನಾಡು ನಮಿಸಿದ ಪಾವನಾತ್ಮ
ಜನಾಭಿಮಾನದ ಕೇಂದ್ರ ಬಿಂದು
ಎಲ್ಲರ ಗೆಲ್ದ ಅಜಾತಶತ್ರು

ನೂರು ಸಂತರ ಮೀರ್ದ ನಗುವು
ಜಗದ ಏಳ್ಗೆಯ ಜ್ಞಾತ ನಿಲುವು
ಮಾನವತ್ವವ ತೋರ್ದ ಗುರುವು
ಜ್ಞಾನ ಪಡೆದ ಶ್ರೇಷ್ಟ ಗೆಲುವು

ಮೇರು ಶಿಖರವನೇರ್ದ ತಾಳ್ಮೆ
ಮನುಜ ಪಥಕೆ ತುಡಿದ ಒಲುಮೆ
ಕೇಡ ಬಗೆಯದ ದಿವ್ಯ ದೃಷ್ಟಿ
ದೇಶ ಪಡೆದ ಪುಣ್ಯ ಸೃಷ್ಟಿ

ಸರಳ ಬಾಳ್ವೆಯ ಸಾಹುಕಾರ
ಕ್ಷಿಪಣಿ ತಂತ್ರದ ನೇತಾರ
ಎಲ್ಲರೊಲುಮೆಯ ನಿಜ ಹರಿಕಾರ
ಸಂಸ್ಕೃತಿಯ ಬೆಸೆದ ನೇಕಾರ

ಮಳೆಹನಿ

ಆಗಸದಿಂದ ಮಳೆಯದು ಸುರಿದು
ಇಳೆಯನು ತೊಳೆದಿತ್ತು
ಬೆಡಗಿನ ಭೂಮಿಗೆ ಪನ್ನೀರೆರಚಿ
ಕೊಳೆಯನು ಕಳೆದಿತ್ತು

ಕಾಮನಬಿಲ್ಲಿನ ಮೈಯನು ಸವರಿ
ಮಳೆಹನಿ ಇಳಿದಿತ್ತು
ಮಿಂಚಲಿ ಮಿಂದ ರನ್ನದ
ಹರಳಿನ ಅಂದದಿ ಹೊಳೆದಿತ್ತು

ಚಂದದಿ ನಗುವ ಹಸಿರಿನ ಚಿಗುರಿಗೆ
ಮುತ್ತನು ಇಡುತಿತ್ತು
ತನ್ನೊಡಲಿಂದ ಕೋಟಿ ಸೂರ್ಯರ
ಕಾಂತಿಯ ಸೂಸಿತ್ತು

ನೋವನು ಮರೆತ ಹೃದಯವು
ಇಂದು ಸಂತಸ ತಳೆದಿತ್ತು
ನೋಡುತ ನಿಂತ ಮನಸದು
ನಲಿಯುತ ಲೋಕವ ಮರೆತಿತ್ತು

ಬೀರಪ್ಪನ ದಯೆ

ಊರ ಮುಂದಣ ಗುಡಿಯ ರಳಿಯ ಮರ ಬೀಸಿ
ಕೇರಿ ಒಳಗೆಲ್ಲ ತಂಗಾಳಿ|| ಸುಳಿದು
ಬೆಂದ ಮನಕೆಲ್ಲ ತಂಪೆರೆದೋ

ಸ್ವಾಮಿ ನಮ್ಮಪ್ಪನ ಕರುಣೆಯ ಕಣ್ಣಿಂದ
ಕಪ್ಪು ಕತ್ತಲೆ ದೂರಾಗಿ|| ಜಗಕೆಲ್ಲ
ಹೊಳಪಿನ ಬೆಳಕು ಇಳಿದಾವೊ

ನೀಲಿ ಆಗಸದಲ್ಲಿ ತೇಲುತ ಸಾಗುವ
ಕಪ್ಪಾನೇ ಮೋಡ ಭುವಿಗಿಳಿದು|| ಧರೆಯ
ಒಪ್ಪ ಓರಣವಾಗಿ ತೊಳೆದಾವೋ

ಬೆಟ್ಟದ ನೀರು ಬರಡಾದ ಭುವಿಗಿಳಿದು
ಊರ ಮುಂದಣ ಕೆರೆತುಂಬಿ|| ಹರಿದು
ನೆಲವೆಲ್ಲ ಹಸಿರುಕ್ಕಿ ನಗುತಾವೆ

ಜೀವ ಕಾಯೂವ ಬೀರಪ್ಪನ ದಯೆಯಿಂದ
ರಗರಗ ಸುಡುವ ಬೇಸಗೆ|| ಸರಿದೋಡಿ
ನಿಗಿಕೆಂಡ ನಗುವ ಹೂವಾದೊ

ವಿರಹ

ದೀಪದ ಎಣ್ಣೆ ತೀರುವಷ್ಟರಲ್ಲಿ
ಒಬ್ಬರ ಮುಖವನ್ನೊಬ್ಬರು ಕಣ್ತುಂಬಿ ಕೊಳ್ಳೋಣ
ತೀರಿದ ನಂತರ ಕಾತರ ತುಂಬಿರುವ
ಮೈ-ಮನಸ್ಸುಗಳ ಸರದಿ

ಮದನನ ಬಾಣದಿರಿತಕ್ಕೆ 
ದಹಿಸುತ್ತಿದೆ ವಿರಹದಗ್ನಿ ಜ್ವಾಲೆ
ಉಪಶಮನಕ್ಕೆ ಈಜಬೇಕಿದೆ
ಶೃಂಗಾರ ಶರಧಿ ನಾವೀಗಲೆ

ಉಸಿರಲೆಗಳಬ್ಬರಕ್ಕೆ ತೊಯ್ದು ತೊಪ್ಪೆ ದೇಹ
ತೇಗುತ್ತಿವೆ ಅಮಲಿಳಿದ ನೇಹ
ಆರಿದ ದೀಪವಿನ್ನೂ ಹಚ್ಚಿಲ್ಲ
ಹಚ್ಚುವ ಮನಸೂ ಇಲ್ಲ

ನೀನಿರದ ಬಾಳು

ಏನಿರಲೇನು ಬದುಕೇ ಬರಡು
ನೀನಿರದ ಈ ಬಾಳಿನಲಿ
ಜಗವೇ ಸೊಗಸು ನೀ
ಕೂಡಲು ನನ್ನ ಒಲುಮೆಯಲಿ

ಎದೆಯ ಕುಲುಮೆ ಕುದಿಯುತಿದೆ
ಭಾವ ಚಿಲುಮೆ ಜಿನುಗಿರಲು
ಉಸಿರೇ ಕೊರಳ ಬಿಗಿಯುತಿದೆ
ನಾನಿರಲು ಏಕಾಂತದೊಳು

ಎಲ್ಲ ಬೇಗೆಯೂ ಮಂಜಿನಿಬ್ಬನಿ
ನೀನಿರೆ ನನ್ನ ಸನಿಹದಲಿ
ಮುತ್ತಿನ ಹನಿಗಳು ಸುರಿದ ಕಂಬನಿ
ನೀ ಸುಳಿಯಲು ಒಮ್ಮೆ ಎದುರಿನಲಿ

ಕೆಸರು ಮೆತ್ತಿದ ಕನಸು

ಸುತ್ತುವರಿದಿವೆ ಕೆಸರು ಮೆತ್ತಿಕೊಂಡ ಸಿಹಿ ಕನಸುಗಳು
ಅಂದೊಮ್ಮೆ ತಬ್ಬಿದ್ದವು ಚುಂಬಿಸಿದ್ದವು
ಮಧುರ ಭಾವನೆಗಳ ಹೊಸೆದಿದ್ದವು
ಮುಟ್ಟುವುದಕ್ಕೂ ಅಸಹ್ಯವಾಗಿ ನಿಂತಿವೆ ಇಂದು

ಬರಿದೆ ಗಗನವಾಗಿದ್ದಾಗ
ಸೋನೆ ಸುರಿಸಿ ಕಾಮನಬಿಲ್ಲು ಮೂಡಿಸಿದ್ದವು
ಬಿರುಮಳೆ ಸುರಿಸಿ ತೊಪ್ಪ ತೋಯಿಸಿ
ಕೊಚ್ಚಿಕೊಂಡೊಯ್ಯಲು ಕಾಯುತಿವೆ ಈಗ

ಕಾರ್ಗತ್ತಲ ಬಯಲಲ್ಲಿ ಹೊನ್ಮಿ0ಚು ಮೂಡಿಸಿ
ಚಿತ್ತಾರ ಬರೆದಿದ್ದವು
ಗುಡುಗುಡಿಸಿ ಸಿಡಿಲಬ್ಬರಗೈದು
ಹೊಡೆದುರುಳಿಸಲು ಸಜ್ಜಾಗಿವೆ ಇಂದು

ನಾ ಕಂಡ ಕನಸುಗಳೆಲ್ಲ
ಮತ್ತೊಬ್ಬರ ನನಸಾಗಿ ಅಣಕಿಸುತ್ತಿವೆ
ಶಿಖಂಡಿ ರೂಪಲ್ಲಿ ಹವಣಿಸುತ್ತಿರುವ
ಇವುಗಳೊಂದಿಗೆ ಸೆಣಸಲೂ ಮನವಿಲ್ಲ

ಸೂರಿರದ ಸ್ವಪ್ನಗಳು

ಸೂರಿರದ ಸ್ವಪ್ನಗಳು
ಅಲೆಯುತಿದ್ದವು ದಿಕ್ಕುತಪ್ಪಿ
ಭಾವದ ಸೊಡರಿಡಿದ
ಎದೆಯೊಳಗೆ ಸೇರಿದವು ಆಯತಪ್ಪಿ

ಪ್ರೀತಿ ಪ್ರೇಮಾಭಿಮಾನ ಜಿನುಗುವ
ರೋಮಾಂಚ ತಾಣವದು
ಹೀರಿ ಸವಿಸುಧೆಯ
ಪದವಾಗಿ ಪಡೆದವು ಹೊಸ ರೂಪ

ಪದಮೊಳೆತು ಎದೆಯೊಳಗೆ
ಕೊರಳಿಗೆ ನಿಲುಕಿ
ಉಲಿಯುತಿದೆ ಹೊಸರಾಗ ಗಾನವಾಗಿ
ಬಾಳಿಗೆ ಬೆಳಕಾಗಿ

ಮಂಡ್ಯದ ಕಾಳಮ್ಮ

ಅಂದಾದ ಮಂಡ್ಯಾದ ಚೆಂದಾದ ಬೀದೀಲಿ
ತುಂಬೀದ ಮೆರವಣಿಗೆ ಬರುವಾಗ|| ಊರೊಳಗೆ
ತುಂಬೆ ಹೂವರಳಿ ನಗುತಾವೆ

ಭಾರೀ ರಕ್ಕಸರ ಶಿರಗಳ ಹಾರಿಸಿ
ತೂರಾಡಿ ಕಾಳಮ್ಮ ಬರುವಾಗ|| ಏಳೂರ
ಮಾರೀರು ಅವಳ ಜತೆಯಾದ್ರು

ಅನ್ಯಾಯಕಾರರ ಮೆಟ್ಟಿ ಒಂಟಿಕಾಲಲ್ಲಿ
ಕುಂಟುತ್ತಾ ಕಾಳಮ್ಮ ಬರುವಾಗ|| ನಮ್ಮೂರ
ನಂಟೆಲ್ಲಾ ಒಂದಾದೋ

ಗರತೀರು ಹಿಡಿದ ಆರತಿ ತಂಬಿಟ್ಟೀಗೆ
ಅವರ್ಕೆ ಹೂವು ಕಣ್ಣಾಗಿ|| ತಾವು
ಜಗದ ಸೊಗಸೆಲ್ಲ ನೋಡ್ಯಾವೆ

ಶಿಲಾಬಾಲಿಕೆ

ಅಪ್ಸರೆಯರಂದವನೆ ನಾಚಿಸುತ
ನಿಂತಿಹಳಿಲ್ಲಿ ಶಿಲಾಬಾಲಿಕೆ
ಭಾವ ತುಂಬಿ ನಿಂತಿರುವ ಇವಳೇ
ಶಿಲ್ಪಿಯ ಕನಸಿನ ಕಾವ್ಯಕನ್ನಿಕೆ

ಸೊಡರಿಡಿದ ಕರದೊಳು ಮಿಂಚಿವೆ
ಸ್ವರ್ಣಕಾಂತಿಯ ಕಡಗ ಕೈಬಳೆ
ನಿನ್ನ ಪುತ್ಥಳಿಯೆನಲೇನೇ
ಚೆಲುವ ನಟುವಾಂಗ ಬಾಲೆ

ಕೋಟಿ ಹೂಗಳ ನಗೆಯ ತುಟಿಯಲ್ಲಿ ತುಳುಕಿಸಿ
ಸೆಳೆಯುತಿಹೆ ನಿನ್ನೆಡೆ ಮೋಹದ ಬಲೆ ಬೀಸಿ
ಸೂರೆಗೊಂಡಿಹುದೆನ್ನ ನಿನ್ನೀ ಸೌಂದರ್ಯ ರಾಶಿ
ಎನಿತು ಶ್ರದ್ಧೆಯನೊಹಿಸಿ ಕೆತ್ತಿಹ ಶಿಲ್ಪಿ ಮಯ್ಯೆಲ್ಲಾ ಕಣ್ಣಾಗಿಸಿ

ಆಸೆ

ತಳಿರಿನ ತಂಪಲಿ ಉಳಿಯುವ ಭೃಂಗಕೆ
ಗೆಜ್ಜೆಯ ಕಟ್ಟುವ ಮಹದಾಸೆ
ಹಾರುವ ಚಿಟ್ಟೆಯ ರೆಕ್ಕೆಗೆ
ಬಗೆ ಬಗೆ ಬಣ್ಣವ ಬಳಿವಾಸೆ

ತೇಲುವ ಚಂದ್ರನ ಕಯ್ಯಲಿ ಹಿಡಿದು
ಬಿಂಬವ ಕಾಣುವ ಹಿರಿಯಾಸೆ
ಹೊಳೆಯುವ ರವಿಯ ಹೊನ್ನಿನ ಕಿರಣವ
ಚಿಮ್ಮುತ ಹಾರಿ ಹಿಡಿವಾಸೆ

ಸಾಗರದಂತೆ ಹಬ್ಬಿದ ಕಾನನಕೋಕುಳಿ
ಎರಚಿ ನಲಿವಾಸೆ
ಡುವ ಮೋಡದ ಮೇಗಡೆ ಕುಳಿತು
ಲೋಕವ ಸುತ್ತಲು ನನಗಾಸೆ

ಜಿಗಿಯುವ ಜಲಪಾತವ ಸೇರಿ
ಪರ್ವತ ತೊಳೆಯುವ ನವಿರಾಸೆ
ಮುಸುಕಿದ ಮಂಜಲಿ ಕರಗುತ ಇಂದು
ಪ್ರಕೃತಿಯೊಡಲಲಿ ಬೆರೆವಾಸೆ