ಬದುಕು ಒಳ್ಕಲ್ಲು

ಒಳ್ಕಲ್ಲಲ್ಲಿ ಖಾರ ಅರದಂಗ್  
ಅರಿತಾ ಐಯ್ತೆ ದುಕು
ಕಷ್ಟ ಬಂದಾಗ್ ಹೆಂಗಿರ್ಬೇಕು
ಅನ್ನೋದ್ ತಿಳ್ಕೋಬೇಕು

ಅತ್ಲಾಗ್ ಇತ್ಲಾಗ್ ಎತ್ಲಾಗ್ ಹೋಗ್ಲಿ
ಎದೆ ಮುಂದುಕ್ ಮಾಡ್ಕಂಡ್ ನಾವು
ಎಷ್ಟೇ ಕಷ್ಟ ಬಂದ್ರು ಸರಿಯೇ
ಹೆದರಿ ಕಣ್ಣೀರ್ ಕರಿಲೇಬಾರ್ದು

ದೊಡ್ಡ ದೊಡ್ಡ ಚೂರಿದ್ದಂಗೆ
ನೋವು ಕಷ್ಟ ದುಃಖ
ಅರದ್ಮ್ಯಾಲ್ ನುಣ್ಣಾಗ್ ಅಯ್ತಾವೆಲ್ಲ
ಕಾಣದಿಲ್ಲ ಪಕ್ಕ

ಜೀವ್ನ ಅನ್ನೋ ಒಳ್ಳೀನೊಳ್ಗೆ
ಕಲ್ನಂಗಿರ್ಬೇಕ್ ಶ್ರಮ
ಪಾಪ ಪುಣ್ಯ ಅವ್ನುಗ್ ಬುಟ್ಬುಟ್
ಸಾಗ್ತಾ ಇರ್ಬೇಕ್ ಕರ್ಮ

ದ್ಯಾವರ್ ಪಗ್ಡೆಯಾಟ

ಮನ್ಸಾ ಮನ್ಸನ್ ಬದ್ಕಾಕ್ಬುಟ್ಬುಟ್
ಮ್ಯಾಲ್ಕುಂತವ್ನೆ ನೋಡ್ತಾ
ಭೂಮಿ ಮ್ಯಾಲಿನ್ ಪಗ್ಡೆಯಾಟ್ದಲ್
ಒಂದೊಂದ್ ಕಾಯ್ನೆ ನಡಸ್ತಾ

ಹೆಣ್ಣು ಹೊನ್ನು ಮಣ್ಣೀನಾಸೆ
ಮನ್ಸುಂಗ ಹೋಗಾಕಿಲ್ಲ
ಅವನ್ಮ್ಯಾಲ್ ಇವ್ನು ಇವನ್ಮ್ಯಾಲವ್ನು
ಕೇಡಲ್ ಕತ್ತಿ ಮಸೀದ್ ಬಿಡಾಕಿಲ್ಲ

ಹೆಂಡ ಕಳ್ಳು ಸಾರಾಯಿಯಂತ
ಅಮ್ಲಲ್ಲವ್ನೆ ಕುಡೀತಾ
ಮ್ಯಾಲಿರೋನು ನಮ್ನೇ ನೋಡ್ತಾವ್ನೆ
ಅನ್ನೋ ಸತ್ಯಾನ್ ಮರ್ತ

ನಿಗಾ ಇಟ್ಟು ಆಟ ಆಡೋನ್
ಪಕ್ಕಕ್ಕಿಟ್ಟಾಂತಂದ್ರೆ ಕಾಯ್ನ
ಹೇಳ್ದೆ ಕೇಳ್ದೆ ಅವನಿಷ್ಟ್ದಂಗೆ
ಮುಗಿಸ್ಬೇಕ್ ಬಾಳಿನ್ ಪಯಣ

ದಿವ್ಯಸನ್ನಿಧಿಯಾಸೆ

ನೋವು ನಲಿವುಂಡಾಯ್ತು ಸಾಕಿನ್ನು ಬಿಡು ಬದುಕೆ
ಪೋಪೆ ಜಗದೋದ್ಧಾರನ ದಿವ್ಯ ಸನ್ನಿಧಿಗೆ ||

ಪ್ರಣಯಸುಖವಾಯ್ತು ವಿರಸ ಮುನಿಸಾಯ್ತು
ಹಾಲುಗಲ್ಲದಸುಳೆಗಳ ಲಾಲಿಸಿ ಪಾಲಿಸಿಯಾಯ್ತು
ಬಂಧು ಬಾಂಧವರೊಡನೆ ಮಿಂದು ಬಂದದ್ದಾಯ್ತು
ಕಷ್ಟ-ಕೋಟಲೆಗೆಲ್ಲ ಕಂಬನಿ ಮಿಡಿದದ್ದಾಯ್ತು

ಕಾಲವಿದು ಚಿರವಲ್ಲ ಬದುಕಿನ್ನು ತರವಲ್ಲ
ತನು ಬಾಗಿದೆ ಮನ ಮಾಗಿದೆ
ಸುಖ-ದುಃಖವನು ಸಮನಾಗಿ ನೋಡುತ
ಕಲ್ಲಿನಂತಿದೆ ಹೃದಯ ಬಸವಳಿಯದೆ

ಇನ್ಯಾವ ಹಂಗಿಲ್ಲ ದೊರೆತನವು ಬೇಕಿಲ್ಲ
ಮಹದಾಸೆ ಎನಗಿಲ್ಲ ಅವನ ಕಾಣ್ಪುದಲ್ಲದೆ
ಮನದೊಳಿಲ್ಲ ಸಿರಿತನದ ಬಯಕೆ
ಹೋಗಬೇಕಿದೆ ಇನ್ನು ಅವನಿರುವ ಜಗಕೆ

ನೋವು ನಲಿವುಂಡಾಯಿತು ಸಾಕಿನ್ನು ಬಿಡು ಬದುಕೆ
ಪೋಪೆ ಜಗದೋದ್ಧಾರನ ದಿವ್ಯ ಸನ್ನಿಧಿಗೆ ||

ಮುರಾರಿ

ಉರಗದ ಹೆಡೆಯಲಿ ಊರಿದ ಪಾದ
ಮಧ್ಯಮ ಪಾಂಡವಗವನದೆ ವೇದ
ಬಿದಿರಿನ ಕೊಳಲೊಳು ಊದುತ ನಾದ
ನಲಿಯಲು ನೋಡು ಎಂಥ ವಿನೋದ

ತುರಗದ ರಥಕೆ ಅವನಿರೆ ವೇಗ
ನೋಡುವ ಕಣ್ಣಿಗೆ ಎಂಥ ಸುಯೋಗ
ಮುರಳಿಯ ಕೊರಳೊಳು ನುಡಿಸಲು ರಾಗ
ರಾಧೆಯ ಹೃದಯದಿ ಪ್ರೇಮಪರಾಗ

ಬಣ್ಣಿಸಲಸದಳ ವಿಸ್ಮಯ ಲೀಲೆ
ತೋರುವ ಕೃಪೆಗೆ ಎಲ್ಲಿದೆ ಎಲ್ಲೆ
ಎತ್ತಿದ ಗಿರಿಯ ಬೆರಳಿನ ಮೇಲೆ
ನೋಡಿರಿ ಕೊರಳೊಳು ಹೂವಿನ ಮಾಲೆ

ಬದುಕುವ ಪರಿಯ ಲೋಕಕೆ ಸಾರಿ
ಮುಕ್ತಿಯ ಮಾರ್ಗವ ಮನುಜಗೆ ತೋರಿ
ನಿಂತಿಹ ಚೆಲುವಿನ ನಗೆಯನು ಬೀರಿ
ನೋಡಿರಿ ನಮ್ಮಯ ದೇವ ಮುರಾರಿ

ತಿಂಗಳಮಾಮ

ತಿಂಗಳಮಾಮ ಆಗಸದಲ್ಲಿ
ಫಳ ಫಳ ಹೊಳೆದಿಹ ನೋಡಮ್ಮ
ತೇಲುವ ಬೆಳ್ಳಿಯ ಕಾಸನು
ಹೋಲುತ ಬರುತಿಹ ನನ್ನೆಡೆ ನೋಡಮ್ಮ

ನೆತ್ತಿಯ ಮೇಲೆ ಗರಿಗಳ ಒಳಗೆ
ಇಣುಕುತ ನೋಡುವ ನನ್ನೆಡೆಗೆ
ಹೆಂಚಿನ ಸಂದಿಯ ಕಿಂಡಿಯ ಮಧ್ಯದಿ
ತೋರುತ ನಗುವನು ಚೆನ್ನ ನಗೆ

ನೋಡುತ ಅವನನು ನಲಿಯುತ ಹಾಡುವೆ
ತಿನಿಸನು ಈಗಲೆ ತಿನಿಸಮ್ಮ
ಚಂದದ ಮಾಮನ ನೋಡುತ ನಲಿಯಲಿ
ಅಣ್ಣನ ಇಲ್ಲಿಗೆ ಕರೆಯಮ್ಮ

ಕರೆದರು ಆಟಕೆ ಬಾರದೆ
ಇಹನು ಅವನನು ಕಂಡರೆ ಮುನಿಸಮ್ಮ
ಎಲ್ಲಿಗೆ ಹೋಗಲಿ ಜತೆಗೆಯೆ ಬರುವನು
ಇವನೆಡೆ ಕೋಪವೆ ಇಲ್ಲಮ್ಮ

ಅಪ್ಪ ಒಂಟೆತ್ತು – ಅವ್ವ ಚಕ್ಕಡಿ

ಅಪ್ಪ ಗಾಡಿ ಎಳೆವ ಒಂಟೆತ್ತು
ಅವ್ವ
 ಹಿಂದೋಡುವ ಚಕ್ಕಡಿ
ಎತ್ತಿನ
 ಹೆಗಲಲಿ ಚಕ್ಕಡಿಯ ನೊಗ
ಸಾಗಿದರು
 ನೋಡಿ ನಗದಂತೆ  ಜಗ

ತುಂಬಿದ ಬಂಡಿಯೊಳು ಆಸೆಗಳ ಬಲುಭಾರ
ಅತ್ತಿಗೆ-ನಾದಿನಿ
 ಮಗ-ಮಗಳು ಮತ್ತವರ ನಗ
ತೂಗಿಸಿ
 ಹಿಂಭಾರ ಮುಂಭಾರ ಸಾಗಿದರು ಬಲುದೂರ
ನೀಡಿ
 ಒಬ್ಬರಿಗೊಬ್ಬರು ನಿರಂತರ ಸಹಕಾರ

ಅಪ್ಪನಿಗಿತ್ತು ನಿಯಮಗಳ ಮೂಗುದಾರ
ಅವ್ವನ
 ಬಂಡಿಗೆ ಕಟ್ಟಳೆಗಳ ಕಡಾಣಿ
ಗುರಿಸೇರಿತು
 ಚಕ್ಕಡಿ ಎಲ್ಲವನು ಹೊತ್ತು 
ಮೂಕಿಯನೆತ್ತಿ
 ಅಪ್ಪನ ಕೊರಳು ಬಿಗಿಯದಂತೆ

ಅಪ್ಪ ಈಗ ಮುದಿಯಾದ ಕುಂಟೆತ್ತು
ಅವ್ವ ಹಳತಾದ
 ಸಾಗದ ಬಂಡಿ
ಅವರಿಗಾಸರೆ ನೀಡಿ
 ಹೊರಬೇಕಿದೆ ನೊಗ
ನಾವಾಗಿ
 ಅವರ ಕರುಳ ಕುಡಿ

ಸಹಧರ್ಮಿಣಿ

ವೇದ್ಯವಾಯಿತು ಇಂದು ದೇವನಿತ್ತ ದೀಕ್ಷಿತಮಂತ್ರ
ನೀನೆನಗೆ ಬಾಳಿನೊಳು ಎನ್ನ ಸಹಧರ್ಮಿಣಿ
ಭಾಗಿಯಾಗಿಹೆ ನೀನೆನ್ನ ಸಕಲ ಕರ್ಮದೊಳು
ಬರಿಯ ಪಾತ್ರವಲ್ಲ ನಿಜದಾಣೆ ನೀ ಬಾಳಬಂಧನದೊಳು

ಪ್ರೀತಿಪ್ರೇಮದಿ ಪೊರೆದೆ ನೀತಿನೇಮವ ಮೆರೆದೆ
ನೀ ಹರಿಸಿದ ಅಮೃತಧಾರೆಯೊಳು ಮಿಂದ ಪರಮಪಾವನ ನಾನು
ಭೋರ್ಗರೆವ ಮಳೆಯಿರಲಿ ಎದೆಬಿರಿವ ಗುಡುಗಿರಲಿ
ಹೌಹಾರದೆ ಬದುಕ ಬದಿಗಿಟ್ಟು ನೆಚ್ಚಿ ನನ್ನೆಡೆ ನಿಂದ ದೇವಿ ನೀನು

ಬಾಳ ಹಣತೆಗೆ ತೈಲವನೆರೆದು ಬೊಗಸೆಯೊಳು ಬೆಳಗಿಸಿದೆ
ಹೃದಯಾಂತರಾಳದಿ ನೀನಿತ್ತ ಸೊಗಸೇನ ಬಣ್ಣಿಸಲಿ
ಪರಿಪೂರ್ಣೆಯೆಂದು ಭಾವಿಸಿದೆ ನೀ ಸಕಲ ಸೌಕರ್ಯವೆನಗಿತ್ತು
ನಿನ್ನ ಪಡೆದ ಪರಿಪೂರ್ಣ ನಾನಹುದು ಬದುಕಿನಲಿ ದೇವನಾಣೆ

ಬಾಡಿದ ಹೂ ಮುಡಿದವರು

ನಮ್ಮವರು ಮೂರ್ತಿಗೆ ಅರಿಶಿನ-ಕುಂಕುಮವನಿಟ್ಟವರಲ್ಲ
ಧೂಪ ದೀಪದಾರತಿ ಬೆಳಗಿದವರಲ್ಲ
ದೂರದಿಂದ ಕಗ್ಗಲ್ಲ ಹೊತ್ತು ತಂದು
ಚಂದಾದ ಮೂರ್ತಿಯ ಕಡೆದವರು

ನಮ್ಮವರು ಶಿಲ್ಪಕೆ ಬೆಣ್ಣೆ ಬಳಿದವರಲ್ಲ
ಗಂಧ ಲೇಪಿಸಿದವರಲ್ಲ
ಗೋಮಾತೆಯ ಸೆಗಣಿ-ಗಂಜಲ ಬಾಚಿ
ಹಸನಾದ ಬೆಣ್ಣೆಯ ತೆಗೆದವರು

ನಮ್ಮವರು ಕಲ್ಲಿಗೆ ಜೇನು ಸುರಿದವರಲ್ಲ
ಅದರ ಪಾದ ತೊಳೆದವರಲ್ಲ
ಕಾಡು ಕಣಿವೆಯ ಹೊಕ್ಕು ಜೇನಹನಿ ಹಿಂಡಿದವರು
ಪಾದೋದಕವ ಕುಡಿದವರು

ನಮ್ಮವರು ದೇವರ ನೆತ್ತಿಗೆ ಹೂ ಮುಡಿಸಿದವರಲ್ಲ
ರ್ಚನೆಗೈದು ಅಕ್ಷತೆಯನೆಸೆದವರಲ್ಲ
ಕಂಪಸೂಸುವ ಮರುಗಮಲ್ಲಿಗೆ ಜಾಜಿಸಂಪಿಗೆ ಬೆಳೆದು
ಬಾಡಿದ ಹೂವ ಕಣ್ಣಿಗೊತ್ತಿ ಮುಡಿಯಲಿರಿಸಿದವರು

ನಮ್ಮವರು ದೇಗುಲದ ಚಾವಡಿಯಲಿ ಕುಳಿತು
ವೇದವನೋದಿ ಮಂತ್ರ ಠಿಸಿದವರಲ್ಲ
ಮುಂಬಾಗಿಲ ತೊಳೆದು ಶುಚಿಗೊಳಿಸಿ
ನಿಂತಲ್ಲೇ ಸ್ವಾಮಿಗೆ ಕೈಮುಗಿದು ಪುನೀತರಾದವರು

ಕಾಲದ ಜೊತೆಗೆ...

ಕಾಲವೊಂದಿತ್ತು ;
ಭೂಮಿ ಆಗಿರಲಿಲ್ಲ ಯಾರಪ್ಪನ ಸ್ವತ್ತೂ
ಆಣೆ ಭಾಷೆಯಿತ್ತರೆ ನ್ಯಾಯ ಮುಗಿಯುತಿತ್ತು
ಮೋಸ ನಡೆಯದಂತೆ ಧರ್ಮ ಕಾವಲಿದ್ದಿತು

ಕಾಲ ಉರುಳಿತು ;
ನೊಗ-ನೇಗಿಲು ಹಿಡಿದು ಉಳುವವರ
ಮೇಲೆ ಹರಿಹಾಯ್ದಿತ್ತು
ಖಡ್ಗ ಕೋವಿ ಹಿಡಿದು ಆಳುವವರ ದಂಡು
ಕಟ್ಟಿಗೆ-ಕೋಲು ಹಿಡಿದು ಬದಿದಾಡಿದವರ
ಮೆಟ್ಟಿ ನಿಂತವು ಖಡ್ಗ ಕೋವಿಗಳು
ಲಗ್ಗೆಯಿಟ್ಟವು ವಸಾಹತುಶಾಹಿಗಳ ಹಿಂಡು

ಕಾಲ ಬದಲಾಗಿದೆ ;
ಖಡ್ಗ ಝಳಪಿಸುತ್ತಿಲ್ಲ
ಕೋವಿ ಗಡರುತ್ತಿಲ್ಲ
ವಸಾಹತುಶಾಹಿಗಳ ಆಡಳಿತವಿಲ್ಲ
ಆದರೂ ಮರಳಿ ಬಂದಿಲ್ಲ ಸರಿದ ಆ ದಿನಗಳು
ಕಾರಣ ಕಾಲ ಬದಲಾಗಿರಬಹುದು
ಜಾಗತೀಕರಣದ ಹೊಳೆ ಕೊಚ್ಚಿರಬಹುದು
ಮನದ ಹೂರಣ ಹಳಸಿರಬಹುದು
ಅಥವಾ..
ಅಂತಃಕರಣ ಸತ್ತು ಎದೆಯೊಳಗೆ ಹೂಳು ತುಂಬಿರಬಹುದು

ಯುಗಾದಿ ಬಂತು

ಯುಗಾದಿ ಬಂತು ಮತ್ತೆ ಬಂತು
ಹರುಷದೊನಲ ಹೊತ್ತು ತಂತು
ಬೇವ ಹೂವು ಮಾವ ತಳಿರು
ಎಲ್ಲೆಲ್ಲೂ ಹೊಸತು ತಂಬೆಲರು

ಅರಳಿ ನಿಂತ ಚೆಲುವ ಹೂವು
ನಗುತಲಿದೆ ಕಂಪ ಸೂಸಿ
ತೀಡುತಿದೆ ತಂಪು ಗಾಳಿ
ಹೊತ್ತು ಗಂಧ ಮೆಲ್ಲ ಬೀಸಿ

ಜಗದಲೀಗ ನವಯುಗದ
ಹೊಸತು ಚಕ್ರ ತಿರುಗಿದೆ
ಸಿಹಿಕಹಿಯ ಸಮನಾಗಿ
ನಮಗೆ ನೀಡ ಬಂದಿದೆ

ಜಗವು ಇತ್ತ ಹೊಸ ಚೆಲುವನು
ಮನವು ಸೋತು ಸವಿದಿದೆ
ಬಾಳ ಕಷ್ಟ-ಸುಖವ ಹೋಲ್ವ
ಬೇವು-ಬೆಲ್ಲ ಮೆಲುತಿದೆ

ನಾಟ್ಯದರಸಿ

ಚೆಲುವ ಕಣ್ಣ ಮಿಂಚಿ ಮಿನುಗಿಸಿ
ನಲಿವ ದೇಹ ಬಾಗಿ ಬಳುಕಿಸಿ
ಉಲಿವ ಕೊರಳ ಏರಿಸಿ ಇಳಿಸಿ
ನಲಿಯುತಿಹಳು ನಾಟ್ಯದರಸಿ

ಚಂದ್ರಮುದ್ರೆಯ ತೋರಿ ಹಸ್ತ
ಊರಿ ನೆಲದಿ ಕುಂಭ ಪಾದ
ತ್ರಿಭಂಗಿಯಲ್ಲಿ ನಿಂತು ನಡುವು
ತೋರಿ ವಿವಿಧ ಭಾವ ಭಂಗಿ

ಕುಣಿತಕ್ಹಾರಿದೆ ಕೊರಳ ಹಾರ
ನುಲಿದು ನಲಿದಿದೆ ನೀಳಜಡೆಯು
ಘಲಿರು ಎಂದು ಕಾಲ ಗೆಜ್ಜೆ
ಲಿಸುತಿರುವುದು ಅವಳ ಹೆಜ್ಜೆ

ಕಯ್ಯ ಬಳೆಯೆನೆ ಘಲ್ಲು ಘಲ್ಲು
ಗಗನಕ್ಹಾರಿದೆ ಅವಳ ಫಲ್ಲು
ರಾಗತಾಳಕೆ ಭಾವ ಸ್ಪುರಿಸಿ
ನೋಡಿರೆಮ್ಮ ನಲಿವ ನಾಟ್ಯದರಸಿ

ಬಾ ಬೆಳಕೇ

ಬಾ ನನ್ನೆದುರಿಂದು ನಲ್ಮೆಯ ಬೆಳಕೇ
ಅಂಧಕಾರವನೆಲ್ಲ ತೊಡೆಯ ಬಾ
ಅಂತಃಕರಣದೊಳಿಂದು ಮಿನುಗು ಬಾ
ಜ್ಞಾನ ಜ್ಯೋತಿಯನಿಂದು ಬೆಳಗು ಬಾ

ನಿನ್ನೊಲುಮೆಯ ಕಣ್ಬೆಳಕಲಿ
ಹೊಳೆಯಬೇಕಿದೆ ನಾನು
ನೀ ತೋರುವ ದಾರಿಯಲಿ
ನಡೆಸಬೇಕಿದೆ ನನ್ನ ನೀನು

ಕಾಲೂರಿ ಕಣ್ಣೊಳಗೆ ಮೆಲ್ಲನಿಳಿದು ಬಾ
ತಳವೂರಿ ಎದೆಯೊಳಗೆ ಹೊಳೆಯ ಬಾ
ದಯಮಾಡಿ ಮನದೊಳಗೆ ನೆಲೆಸು ಬಾ
ಅರಿವೆಂಬ ಸ್ಮೃತಿಯೊಳಗೆ ನಡೆಸು ಬಾ

ನಿನ್ನ ಕಾಂತಿಯಲಿಂದು
ಜಗವ ನೋಡುವ ಬಯಕೆ
ಬಾ ಒಳಗೆ  ಬೆಳಕೆ
ಜಗದ ಸೊಬಗೆನಗೆ ತೋರು ಬಾ

ಸ್ವಚ್ಛ ಹೃದಯ

ಶಿಲ್ಪ ಕಡೆದು ದಣಿವಾರಿಸುವ
ನಿದಿರೆಯೇ ಧ್ಯಾನ
ಕಳೆದ ದಿನಗಳ ನೆನೆಯುತ
ತಂಬಾಕು ಜಗಿಯುವುದೇ ಏಕಾಂತ

ಕಟ್ಟಿಗೆ ಕಡಿದು ಬಳಲಿ
ಬಿಟ್ಟುಸಿರೇ ನಿಟ್ಟುಸಿರು
ಅರಿಯದ ಕಂದನ ತಲೆಯ ಮೇಲೆ
ಕಯ್ಯಾಡಿಸುವ ವೃದ್ಧರದೇ ಪ್ರೀತಿ

ವಿಳಾಸ ತೋರೆ ಜೊತೆಗೂಡುವ
ಬಿಚ್ಚುಮನಸಿನದೇ ಸ್ನೇಹ
ಕಾಣದ ದಡಕೆ ಅಂಬಿಗನೊಡಗೂಡಿ
ದೋಣಿ ಏರುವುದೇ ನಂಬುಗೆ

ಬಾಳಿನೀ ಹಾದಿಯೊಳು ಎಲ್ಲ ತುಂಬಿವೆ
ನಿತ್ಯ ಪಯಣದಿ
ನೋಡಬೇಕಿದೆ ಅರಿತು ನಾವು
ತೆರೆದ ಸ್ವಚ್ಛ ಹೃದಯವ

ಹರೆಯದ ನೆರೆ

ಹರೆಯದ ನೆರೆ ಬಂದಿದೆ ಆಸೆಯ ಹೊರೆ ಹೆಚ್ಚಿದೆ
ಚಿಗುರು ಮೀಸೆ ಮೇಲೆ ಕಯ್ಯಿ ತೀಡಿ ತೀಡಿ ತಿರುವಿದೆ
ಜಗದ ಬಗೆಯ ಸುಖವನೆಲ್ಲ ತನ್ನದೆಂದೆ ತಿಳಿಯುತ
ಬೀಗಿ ಬೀಗಿ ನಡೆಯುತಿರುವ ಎಲ್ಲ ಗಮನ ಸೆಳೆಯುತ

ಕೆಂಪು ಅಂಗಿ ಹಸಿರು ಲುಂಗಿ ಕ್ಷಣ ಕ್ಷಣಕು ವಿವಿಧ ಭಂಗಿ
ಮೇಲೆ ಕೋಟು ತೊಟ್ಟು ಎಂದುಕೊಂಡ ತಾನೆ ಕೆಂಪು ಪರಂಗಿ
ಪೈಸೆ ಕೆಲಸ ಮಾಡಲೊಲ್ಲ ಗೆಳೆಯ-ಗುಂಪು ಬಿಡಲು ಒಲ್ಲ
ಅವ್ವ ಬೈದರಂತು ತಾನೆ ಏರಿಸಿರುವ ತನ್ನ ಸೊಲ್ಲ

ತರಹೇವಾರಿ ಮೆಟ್ಟು ಬೂಟು ಕೆದರಿಕೊಂಡು ತಲೆಯ ಜುಟ್ಟು
ಹಟವ ಬಿಡನು ಏನೇ ಆಗಲಿ ಹಿಡಿದದ್ದೇ ಪಟ್ಟು
ಹೊಸದು ಸಿನಿಮ ನೋಡಿ ಬಂದ ಇವನಿಗುಂಟು ಎಲ್ಲ ಶೋಕಿ
ಹರೆಯದ ನೆರೆ ಬಂದಿದೆ ಇವನ ಕೊಚ್ಚಿ ತೊಯ್ದಿದೆ