ಮದನಿಕೆ

ನೋಡಲ್ಲಿ ನಲಿಯುವಾ ಮದನಿಕೆ 
ಕಣ್ಣಲ್ಲೆ ಕರೆದಿಹಳು ಸರಸಕೆ 
ಅವಳ ವಯ್ಯಾರದೊಂದೊಂದು ನಿಲುವು 
ತೋರಿದೆ ಅಂಗಾಗ ಸೊಬಗು 

ಬಿತ್ತರದಾಟ ತೋರುತ ಬಿನ್ನಾಣಗಿತ್ತಿ 
ಕಾಡಿಹಳು ಕಣ್ಣಲ್ಲಿ ಕಾಮನೆಗಳ ಬಿತ್ತಿ 
ಲಲಿತಾಂಗಿ ನಿನ್ನ ಬಳುಕುವಾ ತನುವು 
ತೆರೆದಿದೆ ಮೈಮಾಟ ಚೆಲುವು

ಸಗ್ಗ-ಸೌಂದರ್ಯವನೆಲ್ಲ ಬಸಿದು 
ಬಂದಿಹಳು ಮೊಹನಾಂಗಿ ಭುವಿಗಿಂದು ಇಳಿದು 
ದರ್ಪಣದೊಳು ಮೊಗವಿತ್ತ ಶಿಲ್ಪಿಯಾ ಸೊಬಗೆ
ಅರ್ಪಣೆ ನನ್ನ ಮನವಿಂದು ನಿನಗೆ

ನೆನಪೇ...


ಬೇಡವೆಂದರೂ ಏಕೆ ಬರುವೆ ನೆನಪೇ
ಮನದಂಗಳಕೆ ಮತ್ತೆ ಮತ್ತೆ
ತೆರಳು ದೂರಕೆ ಇನ್ನೂ ದೂರಕೆ
ಮರಳದಿರು ನನ್ನೀ ಲೋಕಕೆ

ಪವಡಿಸಿದೊಡನೆ ಹರಡುವೆ
ಕೆಸರ ಮೇಲಿನ ಕಳೆಯಂತೆ
ಏಕಾಂತದೊಳು ಕ್ಷಣದೆ ಹಬ್ಬುವೆ
ಉಸಿರುಗಟ್ಟಿಸುವ ಬಳ್ಳಿಯಂತೆ

ನೋಡುವ ಪ್ರತಿ ನೋಟದೊಳು ಪ್ರಜ್ವಲಿಸುವೆ
ಇಬ್ಬನಿಯೊಳಗಿನ ಕೋಟಿ ಕಿರಣಗಳಂತೆ
ಬೆಳ್ಳಿಚುಕ್ಕಿಗೆ ದೃಷ್ಟಿ ನೆಟ್ಟಿರುವಾಗ
ಹೊಳೆಯುವೆ ಪುಟ್ಟ ಹಣತೆಯಂತೆ


ಮುದದಿಂದಲಿ ನಲಿಯುವಾಗ ಬೆರೆಯುವೆ
ರುದ್ರ ವೀಣೆಯ ಸ್ವರದಂತೆ
ಮತ್ತಿನಲಿ ಮೈಮರೆತಿರುವಾಗ ಎಚ್ಚರಿಸುವೆ
ಚಾಟಿಯಿಂದಲಿ ಬೀಸಿದಂತೆ