ಬಾಡಿದ ಹೂ ಮುಡಿದವರು

ನಮ್ಮವರು ಮೂರ್ತಿಗೆ ಅರಿಶಿನ-ಕುಂಕುಮವನಿಟ್ಟವರಲ್ಲ
ಧೂಪ ದೀಪದಾರತಿ ಬೆಳಗಿದವರಲ್ಲ
ದೂರದಿಂದ ಕಗ್ಗಲ್ಲ ಹೊತ್ತು ತಂದು
ಚಂದಾದ ಮೂರ್ತಿಯ ಕಡೆದವರು

ನಮ್ಮವರು ಶಿಲ್ಪಕೆ ಬೆಣ್ಣೆ ಬಳಿದವರಲ್ಲ
ಗಂಧ ಲೇಪಿಸಿದವರಲ್ಲ
ಗೋಮಾತೆಯ ಸೆಗಣಿ-ಗಂಜಲ ಬಾಚಿ
ಹಸನಾದ ಬೆಣ್ಣೆಯ ತೆಗೆದವರು

ನಮ್ಮವರು ಕಲ್ಲಿಗೆ ಜೇನು ಸುರಿದವರಲ್ಲ
ಅದರ ಪಾದ ತೊಳೆದವರಲ್ಲ
ಕಾಡು ಕಣಿವೆಯ ಹೊಕ್ಕು ಜೇನಹನಿ ಹಿಂಡಿದವರು
ಪಾದೋದಕವ ಕುಡಿದವರು

ನಮ್ಮವರು ದೇವರ ನೆತ್ತಿಗೆ ಹೂ ಮುಡಿಸಿದವರಲ್ಲ
ರ್ಚನೆಗೈದು ಅಕ್ಷತೆಯನೆಸೆದವರಲ್ಲ
ಕಂಪಸೂಸುವ ಮರುಗಮಲ್ಲಿಗೆ ಜಾಜಿಸಂಪಿಗೆ ಬೆಳೆದು
ಬಾಡಿದ ಹೂವ ಕಣ್ಣಿಗೊತ್ತಿ ಮುಡಿಯಲಿರಿಸಿದವರು

ನಮ್ಮವರು ದೇಗುಲದ ಚಾವಡಿಯಲಿ ಕುಳಿತು
ವೇದವನೋದಿ ಮಂತ್ರ ಠಿಸಿದವರಲ್ಲ
ಮುಂಬಾಗಿಲ ತೊಳೆದು ಶುಚಿಗೊಳಿಸಿ
ನಿಂತಲ್ಲೇ ಸ್ವಾಮಿಗೆ ಕೈಮುಗಿದು ಪುನೀತರಾದವರು

No comments:

Post a Comment