ಅಪ್ಪ ಒಂಟೆತ್ತು – ಅವ್ವ ಚಕ್ಕಡಿ

ಅಪ್ಪ ಗಾಡಿ ಎಳೆವ ಒಂಟೆತ್ತು
ಅವ್ವ
 ಹಿಂದೋಡುವ ಚಕ್ಕಡಿ
ಎತ್ತಿನ
 ಹೆಗಲಲಿ ಚಕ್ಕಡಿಯ ನೊಗ
ಸಾಗಿದರು
 ನೋಡಿ ನಗದಂತೆ  ಜಗ

ತುಂಬಿದ ಬಂಡಿಯೊಳು ಆಸೆಗಳ ಬಲುಭಾರ
ಅತ್ತಿಗೆ-ನಾದಿನಿ
 ಮಗ-ಮಗಳು ಮತ್ತವರ ನಗ
ತೂಗಿಸಿ
 ಹಿಂಭಾರ ಮುಂಭಾರ ಸಾಗಿದರು ಬಲುದೂರ
ನೀಡಿ
 ಒಬ್ಬರಿಗೊಬ್ಬರು ನಿರಂತರ ಸಹಕಾರ

ಅಪ್ಪನಿಗಿತ್ತು ನಿಯಮಗಳ ಮೂಗುದಾರ
ಅವ್ವನ
 ಬಂಡಿಗೆ ಕಟ್ಟಳೆಗಳ ಕಡಾಣಿ
ಗುರಿಸೇರಿತು
 ಚಕ್ಕಡಿ ಎಲ್ಲವನು ಹೊತ್ತು 
ಮೂಕಿಯನೆತ್ತಿ
 ಅಪ್ಪನ ಕೊರಳು ಬಿಗಿಯದಂತೆ

ಅಪ್ಪ ಈಗ ಮುದಿಯಾದ ಕುಂಟೆತ್ತು
ಅವ್ವ ಹಳತಾದ
 ಸಾಗದ ಬಂಡಿ
ಅವರಿಗಾಸರೆ ನೀಡಿ
 ಹೊರಬೇಕಿದೆ ನೊಗ
ನಾವಾಗಿ
 ಅವರ ಕರುಳ ಕುಡಿ

1 comment: