ಅವ್ವ ನೆನಪಾದಳು

ನಡುಮನೆಯ ಒಳಕಲ್ಲು ಗುಡುಗುಡಿಸಿ
ಅರೆವ ಖಾರ ಘಮಗುಡಲು
ಅವ್ವ ನೆನಪಾದಳು

ತುಂಬಿದ ಬಿಂದಿಗೆಯ ನೆತ್ತಿಯ ಮೇಲೊತ್ತು
ತುಂಬುಗಂಭೀರದಲಿ ಹೆಣ್ಣೊಂದು ಬರುವಾಗ
ಅವ್ವ ನೆನಪಾದಳು

ತೂಗು ನೆಲುವಿನ ಮೇಲೆ ಬೆಲ್ಲ ಬೆರೆಸಿದ
ಹಾಲು ನಸುಗಂಪು ಬೀರಿರಲು
ಅವ್ವ ನೆನಪಾದಳು

ಮಜ್ಜಿಗೆಯ ಕಡೆಗೋಲು ಹೊಸಮಡಕೆಯ
ಮೊಸರಲ್ಲಿ ಹಸಿಬೆಣ್ಣೆ ತೆಗೆದಿರಲು
ಅವ್ವ ನೆನಪಾದಳು

ನೆತ್ತಿಗೊತ್ತಿದ ಬೆಚ್ಚಗಿನ ಹರಳೆಣ್ಣೆ
ನೊಸಲ ಮೇಲಿಳಿದಿರಲು
ಅವ್ವ ನೆನಪಾದಳು

ಮುಂಬಾಗಿಲ ಹೊಸಿಲಲ್ಲಿ ಹಸನಾದ
ರಂಗೋಲಿ ನಸುನಗುತ ಅರಳಿರಲು
ಅವ್ವ ನೆನಪಾದಳು

ನೀರೊಲೆಯ ಉರಿಗೊಳ್ಳಿ ಧಗಧಗಿಸಿ ಉರಿವಾಗ
ಆದಿಶಕ್ತಿ… ಅನಂತಶಕ್ತಿ… ಅಪಾರಶಕ್ತಿ…
ಅವ್ವ ನೆನಪಾದಳು… ನನ್ನವ್ವ ನೆನಪಾದಳು

ದಣಿದ ವೀಣೆ

ಏಕೆ ದಣಿದಿದೆ ವೀಣೆ ದನಿ
ಇದೇಕೆ ಜಾರಿದೆ ಕಣ್ಣ ಹನಿ

ಯಾವ ನೆನಪು ಕಾಡುತಿದೆ
ಏಕೆ ಕಣ್ಣು ತೋಯುತಿದೆ
ಯಾವ ಮಾತು ಹೊರಡದೆ
ತುಟಿಯಂಚಲೆ ತಡೆದಿದೆ

ಶೋಕರಾಗ ಮಿಡಿದು ಹೃದಯ
ತನಗೆ ತಾನೇ ಬೇಯುತಿದೆ
ಮೂಕವೇದನೆ ತುಂಬಿಬಂದು
ಎದೆಯ ಭಾವ ನರಳುತಿದೆ

ಇಂಪಾದ ದನಿಯೊಡೆದು
ಏಕೆ ಕಂಠ ಬಿರಿದಿದೆ
ಬಿಸಿಮೌನದ ತಾಪಕೆ
ಉಸಿರು ಭಾರವಾಗಿದೆ

ಕೇಳುತಿರಲಿ ನಿನ್ನ ದನಿಯು…

ಮಬ್ಬು ಬೆಳಗು ಹರಿಯುವಾಗ
ಇಬ್ಬನಿಹನಿ ಕರಗುವಾಗ
ಹಕ್ಕಿಗಾನ ಉಲಿಯುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಸಂಜೆ ಕಡಲು ಮೊರೆಯುತಿರಲು
ಅಲೆಯು ಬಳುಕಿ ಆಡುತಿರಲು
ಮೈಯ ಮರೆತು ನೋಡುತಿರಲು
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಇರುಳು ಚಂದ್ರ ಹೊಳೆಯುವಾಗ
ತಾರೆ ಮಿಂಚಿ ಮಿನುಗುವಾಗ
ಮೆಲ್ಲ ಗಾಳಿ ಬೀಸುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಮಡಿಲಿನಲ್ಲಿ ತಲೆಯನಿಟ್ಟು
ಕನಸಿನಲ್ಲಿ ತೇಲುವಾಗ
ಯಕ್ಷಲೋಕ ಗಾನದಂತೆ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಒಂಟಿ ಯಾನ ಮಾಡುವಾಗ
ತುಂಟ ನೆನಪು ಮೂಡಿ ಬಂದು
ಮುಗುಳು ನಗೆಯು ಮೂಡುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಮೂಡಲ ಸೀಮೆಗೆ ಮಳೆಯಾಯ್ತು

ಮೂಡಲ ಸೀಮೆಗೆ ಮಳೆಯಾಯ್ತು ನೋಡು ಬಾರೊ ಅಣ್ಣಾ
ಬೆಟ್ಟಗುಡ್ಡಗಳು ನಕ್ಕುನಗುತಾವೆ ಹೊತ್ತು ಹಸಿರು ಬಣ್ಣ

ಸೂರುಸೂರಿನ ಅಂಚಲ್ಲಿ ಮುತ್ತಿನಹನಿಗಳು ತೂಗಾಡಿ
ಬೊರೆಮೇಲಿನ ಹೊಸನೀರು ಹಳ್ಳಕೊಳ್ಳದಲಿ ಬಳುಕಾಡಿ
ಊರಮುಂದಿನ ಓಣಿಯಲಿ ತುಂಬಿಹರಿದಾವು ಕೆರೆಕೋಡಿ

ಮೂಡಲ ಸೀಮೆಯ ಬಯಲೆಲ್ಲ ಮಳೆಬಂದು ತಣಿಲಾಯ್ತು
ಮರಮರವೆಲ್ಲ ಚಿಗುರೊಡೆದು ನೆಲಕೆಲ್ಲಾ ನೆಳಲಾಯ್ತು
ಹಚ್ಚಹಸಿರಿನ ಮರದಲ್ಲಿ ಕೋಗಿಲೆಕಂಠ ಕೊಳಲಾಯ್ತು

ದೇವ ದೇವಿಯರ ಗುಡಿಯಲ್ಲಿ ಗಂಟೆ ಜಾಗಟೆ ಮೊಳಗಿದವೋ
ತೇರಬೀದಿಯ ತುಂಬೆಲ್ಲ ತರತರ ಹೂಗಳು ಘಮ್ಮೆಂದೋ
ಹಟ್ಟಿಹಟ್ಟಿಯ ಹೊಸಿಲಲ್ಲಿ ಸಾಲು ದೀಪಗಳು ಬೆಳಗಿದವೋ

ಮಾಗಿಯ ಚಳಿ

ಈ ಮಾಗಿಯ ಚಳಿಯೆ ಹೀಗೆ:
ಅವಳ ಮುಡಿಜಾರಿದ ಮಲ್ಲಿಗೆಯ ಘಮಲನ್ನು
ತೀಡಿ ತಂದ ಮಾಗಿಯ ಕುಳಿರ್ಗಾಳಿ
ಕಚಗುಳಿಯಿಟ್ಟು ಬೆಳ್ಳಂಬೆಳಗ್ಗೆ ಮತ್ತೇರಿಸುತಿದೆ

ಅವಳ ಕಡೆಗಂಬದ ಸೊಂಟ ಬಳಸಿದ
ನನ್ನ ಕೈ ಬಿಡಲೊಲ್ಲದು
ನನ್ನ ತೋಳತೆಕ್ಕೆಯಲ್ಲಿ ಮುದುಡಿದ ಅವಳ ಮುಖ
ಸೂರ್ಯ ನೆತ್ತಿಗೆ ಬಂದರೂ ಅರಳಲೊಲ್ಲದು

ಕುಳಿರ್ಗಾಳಿ ಬೀಸಿದಂತೆಲ್ಲಾ ಬಿಗಿದಪ್ಪುವ ಅವಳು
ಎದೆಗೂಡಿನಲಿ ಬಚ್ಚಿಟ್ಟು ಬಿಸಿಯೀವ ನಾನು
ಈ ಮಾಗಿಯ ಚಳಿಗೆ ನಿಗಿಕೆಂಡವೂ ಬಿಸಿತಾರದು
ಮಾಗಿ ಬರಲು ಮೈ ಮುದುಡಿದೆ ಮನ ಅರಳಿದೆ 

ಕಾರ್ಮಿಕರು

ಕಾರ್ಮಿಕರಿವರು ಕಾರ್ಮಿಕರು
ದೇಶದೇಳಿಗೆಗೆ ಶ್ರಮಿಸುವ ಶ್ರಮಿಕರು
ಮೈಯ್ಯನು ಮುರಿದು ನಗುತಲಿ ದುಡಿದು
ಪ್ರಗತಿಯ ತರುವ ನಾವಿಕರು

ಸುಳ್ಳನಾಡದೆ ಕದ್ದು ಓಡದೆ
ಬೆವರನು ಹರಿಸಿ ದುಡಿವವರು
ಕೇಡನು ಬಯಸದೆ ದ್ರೋಹವ ಬಗೆಯದೆ
ನಂಬಿಕೆ ಗಳಿಸಿ ಗೆಲುವುದ ಬಲ್ಲರು

ದುಡಿಮೆ ಎನ್ನುವ ದೇವರ ದೀಪಕೆ
ಪರಿಶ್ರಮ ತೈಲವನೆರೆಯುವರು
ಕ್ರಾಂತಿಯ ಬೆಳಕನು ನಾಡಿಗೆ ತರುವ
ಕಾಯಕ ಮಾರ್ಗದ ಯೋಗಿಗಳು

ಛಲಗಾತಿ

ಅವ್ವ ಮುದ್ದೆ ಮಾಡುವ ಪರಿಯ ನೋಡಬೇಕು
ಹಿಡಿದ ಕೆಲಸವ ಬಿಡದೆ ದುಡಿವ ಅವಳ ಛಲವ ನೋಡಬೇಕು
ಮಡಕೆಯ ಬಾಯಿಗೆ ಕವಗೋಲು ಸಿಕ್ಕಿಸಿ
ಕೋಲಿನಲ್ಲಿ ಹಿಟ್ಟು ತಿರುವಿ ಕಟ್ಟಿದ ಗಂಟುಗಳ ಪುಡಿಮಾಡುವುದ

ಅಂದು ನಾನು ಕನಸ ಕಂಡಿದ್ದೆ: 
ಅವ್ವನಂತೆ ನಾನೂ
ಈ ಜಗಕ್ಕಂಟಿದ ಜಾಡ್ಯದ ಗಂಟುಗಳನ್ನೆಲ್ಲ ತೊಡೆದು ಬಿಡುವೆನೆಂದು
ಅವ್ವ ಛಲಗಾತಿ ಹಿಡಿದ ಕೈಂಕರ್ಯವ ಬಿಡದೆ ಕೊನೆವರೆಗೂ ನಡೆಸಿದಳು
ಇಂದು ಮಾಡಿದ ಮುದ್ದೆಯೂ
ಅದೇ ಹದ… ಅದೇ ನುಣುಪು… ಅದೇ ಗಾತ್ರ… ಒಂದೂ ಗಂಟಿಲ್ಲ

ನಾಚಿಕೆಯಾಗುತ್ತಿದೆ ನನಗೆ...
ಬದುಕುವಾಸೆಗೆ ನಾನೂ ಜಗದ ಜಾಡ್ಯದ ಗಂಟಾಗಿಬಿಟ್ಟೆನೆಂದು
ಭಯವಾಗುತ್ತದೆ ಆ ಛಲಗಾತಿ ಹಿಟ್ಟಿನ ದೊಣ್ಣೆಯೊಡನೆ ಬಂದು
ನನ್ನನ್ನು ಹೊಸಕಿಬಿಡುವಳೋ ಎಂದು

ಬದುಕಿನ ಬಣ್ಣ

ಎಂತೆಂತಹ ಬಣ್ಣಗಳು ನಮ್ಮ ಬದುಕ ಚಿತ್ರದಲಿ
ಮಾಸದಂತೆ ಉಳಿದಿವೆ ನನ್ನ ಮನದ ಭಿತ್ತಿಯಲಿ

ಬರಿಯ ಬಿಳಿಯಪರದೆ ನನ್ನ ಬಾಳು ನೀನಿರದೇ ಅಂದು
ಏಳೇಳು ವರ್ಣಗಳು ಮೇಳೈಸಿವೆ ಇಂದು
ನೀ ಬಂದ ದಿನದಂದು ಬದುಕೆಲ್ಲ ಹಸಿರು
ಕಡುನೀಲಿ ಕನಸಿನಲು ನಿನ್ನದೇ ಹೆಸರು 

ಮೋಹಕ ತಿಳಿನೀಲಿಯ ನಗೆಯ ನೀನು ಸೂಸಿರಲು
ಕೆನ್ನೀಲಿಯ ಅಮಲಿನಲಿ ನಿನ್ನ ನಾನು ಸೇರಿರಲು
ಜಗವೆಲ್ಲ ಕೆಂಪೇರಿ ನಮ್ಮ ನೋಡಿ ನಗುತಲಿತ್ತು
ಮುಚ್ಚಿದ ಕಡುಗಪ್ಪನು ಒಲವ ಬೆಳಕು ಓಡಿಸಿತ್ತು

ಸಂತಸದ ತೆಳುಹಳದಿ ಮನದ ತುಂಬ ಮಿನುಗಿತ್ತು
ನಿನ್ನ ನನ್ನ ಧೃಡ ಶಕ್ತಿ ಕೇಸರಿಯನು ತೋರಿತ್ತು
ಎನಿತು ರಂಗು ಪಡೆದ ಬದುಕು ನಮ್ಮ ಜೀವನವು
ಭಾವದೊಡಲ ನಮ್ಮ ಮನಕೆ ಬಣ್ಣಗಳ ಬಂಧನವು

ದೃಷ್ಟಿ

ಅಡುಗೆಮನೆಯ ಕಪ್ಪು ಕತ್ತಲಲ್ಲಿ
ನನ್ನವ್ವ ನನಗೆ ದೃಷ್ಟಿ ತೆಗೆದಿದ್ದಳು
ಜಗದ ತಾಯ್ತನವೆಲ್ಲ ಸೇರಿ
ಇಡೀ ಸೃಷ್ಟಿಗೇ ದೃಷ್ಟಿ ತೆಗೆದಂತೆ

ಉರಿಯೊಲೆಯ ಮೇಲಿದ್ದ ಪಾತ್ರೆಯ ತಳದ
ಕರಿಮಸಿಯ ಬೊಟ್ಟಿಟ್ಟು ಹಣೆಗೆ...ಗಲ್ಲಕೆ...
ಅದು ಸಾಲದು, ಅವಳ ಕಂದನ ಚಂದಕ್ಕೆ…!
ಬಳಿಯಿದ್ದ ಕಸಬರಿಕೆಯ ಕಡ್ಡಿಗಳಿರಿದು
ಉರಿಬೆಂಕಿಗೆ ಸೋಕಿಸಿ ನೀವಾಳಿಸಿ
ಸಿಡಿದ ಕಡ್ಡಿಯ ಸದ್ದಿನ ಜೊತೆ ತಾನೂ ಬಡಬಡಿಸುತ್ತಿದ್ದಳು
ಸದ್ದಿಗೊಂದರಂತೆ ಬೈಗುಳ ಹಾಕಿ
ಕಣ್ಣು ತಗುಲಿಸಿದವರ ಶಪಿಸುತ್ತ

ಕತ್ತಲ ಮನೆಯ ಮೂಲೆ ಮುಡುಕುಗಳಿಗೆ ಕಣ್ಣಾಯಿಸದೆ
ಖಾತ್ರಿಯಿಂದ ಸಾಮಾನು ಡಬ್ಬಗಳನ್ನು ತೆಗೆಯುವ ಅವಳೆಷ್ಟು ಜಾಣೆ
ಕೈತಪ್ಪಿ ಬದಲಿ ಡಬ್ಬ ತೆಗದದ್ದು ಒಂದುದಿನವೂ ಕಾಣೆ..!
ಹಾಗೆ ತೆಗೆದ ಖಾರದ ಮಯ್ಯ ಕೆಂಪು ಮೆಣಸಿನಕಾಯಿ
ನೆನ್ನೆಯಷ್ಟೇ ಕೆಂಡವಾಗಿದ್ದ ಕಾಲ ಕೆಳಗಿನ ಕರಿಯ ಇದ್ದಿಲನ್ನು
ಮುಷ್ಟಿಯೊಳು ಹಿಡಿದು ನನ್ನಿಂದ ಥೂ... ಎನಿಸುತ್ತಿದ್ದಳು
ಸೆರಗಂಚಿನ ತುದಿಯು ನೆತ್ತಿಯಿಂದ ಪಾದವನ್ನು ಮುಟ್ಟಿಸುತ್ತಿತ್ತು
ನನ್ನ ತುಂಬುಗೆನ್ನೆಯ ಸವರಿದ ಅವಳ ಬೆರಳುಗಳು ನೊಟಕೆ ಮುರಿಯುತ್ತಿದ್ದವು

ತನ್ನ ಜೀವಮಾನವೆಲ್ಲ ಸವೆಸಿದ
ಕಗ್ಗತ್ತಲ ಅವಳ ಅಡುಗೆ ಮನೆಯ ಪ್ರಪಂಚದಲ್ಲಿ
ನಾನು ಕಣ್ಣಗಲಿಸಿ ನೋಡಿದಾಗ ಕಂಡದ್ದು:
ಕಿಟ್ಟ ಕಟ್ಟಿದ ಗೋಡೆಗಳು, ಅರ್ಧ ಉರಿದ ಸೌದೆ,
ಕಂಟು ವಾಸನೆ ಬೀರುವ ನೆಲಕ್ಕೆ ಚೆಲ್ಲಿದ ಬಸಿದ ಗಂಜಿ
ಸುತ್ತಿಕೊಂಡ ಹೊಗೆ, ಪೇರಿಸಿಟ್ಟ ಕಪ್ಪಾದ ಮಡಕೆಗಳು
ಮತ್ತು ನೀರೊಸರಿ ಕೆಂಪಾದ ಅವ್ವನ ಕಣ್ಣು
ಅವಳು ಕಂಡದ್ದು ಮಾತ್ರ ಬರೀ ನನ್ನ ಕಣ್ಣ ಬೆಳಕು…

ಕೂಡಿ ನಡೆವ ತವಕ

ನೀನಿಂದು ಕೇಳು… ಒಳಮನದ ಹಾಡು…
ಬಾ ಬಂದು ಸೇರು… ನನ್ನೆದೆಯ ಗೂಡು…
ನಾಕಂಡ ಕನಸು… ನೀನಿರಲು ನನಸು
ನೀನಾದೆ ಇನಿಯ… ಈ ಮನದ ಸೊಗಸು
ಕನಸು ಮನಸನೆಲ್ಲ ಆವರಿಸಿ… ಮತ್ತೆ ಮೂಡುತಿಹೆ ನೀನೆ ಅವತರಿಸಿ…

ಜೀವನದ ಹಾದಿಯಲಿ, ನಿನ್ನ ಕೂಡಿ ನಡೆವ ಒಂದೇ ತವಕ...
ಸಾಗುತಿಹ ದಾರಿಯಿದು, ಬೇರಾಗದಿರಲಿ ಕೊನೆಯ ತನಕ…
ಜೋಡಿಜೀವದ ಒಂದೆ ಗುರಿಯ, ಸೇರಿ ತಲುಪುವ ಬಾರೊ ಗೆಳೆಯ…
ಮನಸಿನೊಳು ಮೂಡುತಿರುವ, ಕಣ್ಣೆದುರು ಕಾಣದಿರುವ…
ಕನಸಿನ ಚಿತ್ರಕೇ… ಕುಂಚ ಹಿಡಿದು… ಬಣ್ಣ ಬಳಿಯಲು... ಬೇಗ ಬಂದು ಸೇರೋ...

ಈ ಹಾದಿಯೆ ಹೀಗೇ, ನೆಲಬಿರಿದಾ ಹಾಗೇ.. ಹೇ…
ಬಿರುಬಿಸಿಲಿನ ರವಕೆ, ಅಡಿಯಿಡದ ಹಾಗಿದೆ...
ಬರಿಮುಳ್ಳಿನ ಮೊನೆಯೇ... ಜೀವನ ಪಥದೇ...
ಪಯಣದ ತುದಿಯನು ಅರಿಯದೇ ತವಕಿಸಿ...
ಬದುಕಿದು ಬಯಲಲಿ ದಿಕ್ಕೆಟ್ಟು ನಿಂತಿದೇ...

ನಿನ್ನ ನೆನೆದರೆ ನನ್ನೊಳಗೇ, ಒದಗಬಲ್ಲದೇ ಸಾಂಗತ್ಯ?
ನಿನ್ನ ಬರವಿಗೆ ಕಾದಿರುವೆ, ಬಂದು ನೀಡುವೆಯ ಸಾಮೀಪ್ಯ?
ಕೊನೆ-ಮೊದಲಿಲ್ಲದ ದಾರಿಯಿದು, ನೂರು ಮೀರಿದಾ ಕವಲುಗಳು
ಗುರಿಯನು ತಲುಪುವ ಓಟವಿದು, ವೃತ್ತಪಥಗಳ ತಿರುವುಗಳು

ಶೃತಿಯಿರದ ಗಾನದಲಿ... ಹಿತವಿಲ್ಲ ನೋಡು ನಿನ್ನಾ ಮರೆತು
ಹಾಡುವ ಬಾ ನಲಿಯುತಲಿ... ಸ್ವರಾತಾಳದೊಡನೆ ನಾವೂ ಕಲೆತು
ಮೂಕಹಕ್ಕಿಯು ನೇಯುತಿರುವ, ಬಾಯಿತೆರೆದು ಹಾಡದಿರುವ
ಸಹಜತೆಗೂ ಮೀರಿರುವ, ಕಲ್ಪನೆಗೂ ನಿಲುಕದಿಹ
ಒಲವಿನ ಗೀತೆಗೇ... ಭಾವ ಮಿಡಿದು ರಾಗ ಬೆಸೆದು ಹಾಡು ಬಾರೋ ಬೇಗಾ...