ಮಾತಾಗು ಮೌನವೇ…

ಕೊರೆವ ಮೌನವ ದೂಡಿ ಬಾ ಪದವೇ... ಮಾತಾಗಿ ಬಾ

ಭಾವದಬ್ಬರಕೆ ಮರೆಯಾದ ನುಡಿಯೆ
ಕಟ್ಟುಕಟ್ಟಳೆಗಳಲಿ ಕಟ್ಟಿಟ್ಟ ನುಡಿಯೆ
ದುಗುಡ ತುಂಬಿದ ನುಡಿಯೆ ಗುಡುಗುಡಿಸಿ ಬಾ
ಮಸುಕು ಕೋಣೆಯ ಗೋಡೆಯನೊಡೆದು ಬಾ

ಎದೆನೋವ ಬಸಿದ ಬಿಸಿಯುಸಿರ ಕಿಡಿನುಡಿಯೆ
ಹುಸಿಮೌನ ಸರಿಸಿ ನುಸುಳಿ ಬಾ
ಮನದ ಮೂಲೆಯ ಮಂಕಾದ ಪಿಸುಮಾತೆ
ಮಿಂಚಿಮಿನುಗಿ ಚತುರತೆಯಿಂದುಲಿದು ಬಾ

ಎದೆಯಾಳದಲಿ ಅದುಮಿಟ್ಟ ಪದವೇ
ಸಿಡಿದು ಅಬ್ಬರಿಸಿ ಬಾ
ತಮದ ಮೌನವ ಸೀಳಿ
ಮಾರ್ದನಿಸಿ ಮಾತಾಗಿ ಬಾ

ನಿಲ್ಲಿಸದಿರು ಮುರಳಿ ಗಾನವ…

ಚಂದ್ರನಿರದ ನೀಲಿ ಗಗನ
ನೀರಮೇಲೆ ದೋಣಿ ಯಾನ
ಮೊರೆಯುತಿದೆ ಕೊರೆವ ಮೌನ
ನಿಲ್ಲಿಸದಿರು ಮುರಳಿ ಗಾನವ…

ಇರುಳ ಹಾದಿ ಕಾಣದಿರಲು
ಮನವ ತುಂಬಿ ಭಯದ ಮುಗಿಲು
ಕಾಡುತಿದೆ ತೀರದಳಲು
ನಿಲ್ಲಿಸದಿರು ಮುರಳಿ ಗಾನವ…

ಕೊರಳು ಬಿರಿದು ಬಿಕ್ಕುತಿರಲು
ಕಣ್ಣ ನೀರು ಸುರಿಯುತಿರಲು
ಎದೆಯ ತುಂಬ ಏನೋ ದಿಗಿಲು
ನಿಲ್ಲಿಸದಿರು ಮುರಳಿ ಗಾನವ…

ದೂರದೆಲ್ಲೆ ತೀರದಲ್ಲಿ
ಕೊಳಲಗಾನ ಬರಲು ತೇಲಿ
ಮನವು ನಲಿವುದದನು ಕೇಳಿ
ನಿಲ್ಲಿಸದಿರು ಮುರಳಿ ಗಾನವ…

ಭಾವಕೊಂದು ಬಣ್ಣ

ಭಾವಕೊಂದು ಬಣ್ಣಬಳಿದು ನಗುತಲಿದೆ ಮನ
ಹಲವು ವರ್ಣ ಸೇರಿಬೆರೆತ ಬಣ್ಣದೋಕುಳಿ ಜೀವನ

ನಂಬಿಕೆಯೆ ಹಚ್ಚಹಸಿರು ನನ್ನ ನಿನ್ನ ಬಾಳಿಗೆ
ಧೃಡತೆ ಶಕ್ತಿ ಕೇಸರಿಯೆ ಇಹುದು ನಮ್ಮ ಪಾಲಿಗೆ
ನೀಲಾಗಸ ವೈಶಾಲ್ಯ ಕಂಗಳಲ್ಲಿ ತುಂಬಿದೆ
ಹಾಲ ಬಿಳುಪಿಗಿಂತ ಶುದ್ಧ ನಮ್ಮ ಪ್ರೀತಿ ಅರಳಿದೆ

ಹೇಗೋ ಏನೋ ಎಂಬ ಅಳುಕು ನಮ್ಮನಡುವೆ ಮೂಡದೆ
ಅನುಮಾನದ ಬೂದುಬಣ್ಣ ದೂರ ಸರಿದು ಓಡಿದೆ
ರಮಿಸಿ ಆಡುತಿರಲು ನಾವು ಕೆನ್ನೀಲಿಯ (ನೇರಳೆಯ) ರಂಗಿನಲಿ
ಕಡುನೀಲಿಯ ಕನಸ ದೃಶ್ಯ ನನಸಾಗಿದೆ ನಿಜದಲಿ

ಪ್ರೇಮದೊಡಲು ರಂಗೇರಿ ನಸುಗೆಂಪನು ಸೂಸಿದೆ
ಸಂತೋಷದ ತೆಳುಹಳದಿಯು ಚಿತ್ತಾರವ ಬಿಡಿಸಿದೆ
ಹಲವು ಬಣ್ಣ ಸಮ್ಮೇಳನ ಮಳೆಬಿಲ್ಲಿದು ಜೀವನ
ಎದೆಯಭಾವ ರಂಗುಪಡೆದ ಬಣ್ಣಗಳ ತೋರಣ