ಕಾಣದ ಭಾವ

ನಿನ್ನ ಹೆಸರನೆ ಬರೆಯುತಿದೆ
ಶಾಯಿ ಇರದ‌ ಲೇಖನಿ
ಬರೆದ ಕಾಗದ ತೋಯಿಸುತಿದೆ
ಸುರಿದ ಕಣ್ಣ ಕಂಬನಿ

ಕಾಣದಂತ ಅಕ್ಷರದಲಿ
ನೂರು ಭಾವ ಅಡಗಿದೆ
ನಿನ್ನ ನೆನಪ ದೋಣಿಯಲ್ಲೆ
ನನ್ನ ಜೀವ ತೇಲಿದೆ

ಒಲವ ಗೀತೆ ಮೂಡದೇನೆ
ಹೀಗೆ ಮುರುಟಿ ಹೋಗಿದೆ
ಪ್ರೇಮಪತ್ರ ಅರಳದೇನೆ
ಅಳುತ ಮುದುಡಿ ಸೊರಗಿದೆ

ಅಪರಾಧವ ಮಾಡಿದೆನಯ್ಯ

ಒಂದಪರಾಧವ ಮಾಡಿದೆನಯ್ಯಾ ನಿನ್ನ ಗುಡಿಯ ಹೊಕ್ಕದೆ
ಇನ್ನೊಂದಪರಾಧವ ಮಾಡಿದೆನಯ್ಯಾ ನಿನ್ನ ಕಣ್ತುಂಬಿ ಕೊಳ್ಳದೆ
ಮತ್ತೊಂದಪರಾಧವ ಮಾಡಿದೆನಯ್ಯಾ ಕೈಯ್ಯನೆತ್ತಿ ಮುಗಿಯದೆ
ಮಗದೊಂದಪರಾಧವನೆಸಗಿದೆನಯ್ಯಾ ನಿನ್ನ ಸ್ತುತಿಸಿ ಹಾಡದೆ

ನೂರೊಂದಪರಾಧಕೂ ನಿನದೊಂದೇ ತೆರನಾದ ನಗುವು
ಅರಿಯದ ಕಂದನೆಸಗಿದ ತಪ್ಪಿಗೆ ತಾಯಿ ನಯದಲಿ ನಗುವಂತೆ
ಎನ್ನಪರಾಧವ ಮನ್ನಿಸಿ ನನಗೊಂದವಕಾಶವ ನೀಡಯ್ಯಾ...
ನಿನ್ನ ನಾಮವನನುದಿನ ನುಡಿವಂತೆ
ನಿನ್ನ ಭಕುತರ ಪಾದ ತೊಳೆವಂತೆ
ಪರಂಧಾಮ ನಿನ್ನ ಹೆಸರು ಹೇಳುವಾಗ
ಎನ್ನ ಕೊನೆಯುಸಿರು ನಿಲುವಂತೆ 

ಬನ್ನಿ ಮಸಣದ ಮಾರಿಯರೇ...

ಬನ್ನಿ ಮಸಣದ ಮಾರಿಯರೇ ಹುರಿದುಮುಕ್ಕಿಬಿಡಿ
ರುಧಿರ ಶರಧಿಯುಕ್ಕುಕ್ಕಿ ಹೆದ್ದೆರೆಗಳೇಳುತಿವೆ
ಕತ್ತಲರಾಜ್ಯದಿಂದ ಕೆನ್ನಾಲಗೆಯ ಚಾಚಿ ಕೇಕೆಹಾಕುತ ಬನ್ನಿ

ರಣರಂಗದಲಿ ಕದನೋತ್ಸಾಹ ಕಳೆದು ನಿಂತಿರುವೆ
ಕ್ಷಾತ್ರ ತೇಜದ ಖಡ್ಗ ಝಳಪಿಸದೇ ಕಳೆಗುಂದಿದೆ
ಇದಕಿಂತ ಸಮಯವಿಲ್ಲ ಮಾರಣಹೋಮಕ್ಕೆ ಹಾರಿ ಬನ್ನಿ

ಘೋರಾಂಧಕಾರದಿರುಳಿನಲಿ  ಬೆಳಕಿನುಂಡೆಗಳು ಬೇರೂರುವ ಮುನ್ನ
ಬೆಂಕಿಯ ಬೆತ್ತಲೆ ಮೈಯನಪ್ಪಿ ದೇಹ ದಹಿಸುವ ಮುನ್ನ
ಬನ್ನಿ ರಕ್ಕಸ‌ಪೂತನಿಯರೇ ವಿಷವುಣಿಸಿ ಸಾವಿನಮನೆಗೆ ದೂಡಬನ್ನಿ 

ಸವಿನುಡಿಯ ಬೇಡಿದೆ

ಕಟುನುಡಿಗಳೆನ್ನ ತಿವಿದಿಹವು ಇಂದೇಕೋ
ಸೂಜಿಯಲಿ ಜೀವ ಇರಿದಂತೆ
ಅಣಕಿಸುತ ಒತ್ತುತಿದೆ ಮಾತು ಎದೆಯೊಳಗೆ
ಮುಳ್ಳಿನ ಮೊನೆ ಮುರಿದಂತೆ

ಅರ್ಥವಾಗದಿದೆ ಅಸ್ಪಷ್ಟ ಮಾತು
ಎಣ್ಣೆತೋಯ್ದ ಕಣ್ಣು ತೆರೆದಂತೆ
ಕೇಳದಾಗಿದೆ ಸಿಡುಕಿದ ಪಿಸುಮಾತು
ಗಾಳಿಯಲಿ ದೀಪ ಉರಿದಂತೆ

ನಕ್ಕುನುಡಿವೆಯ ಕೊಂಚ
ನಿನ್ನೆದೆಯ ಮಾತು ತಿಳಿವಂತೆ
ಸವಿನುಡಿಗಳಿರದ ಬದುಕು
ನೀರಿನೊಳು ಬಂಡಿ ಎಳೆದಂತೆ

ಬಾಹುಬಲಿ

ವಿಂಧ್ಯಗಿರಿಯ ನೆತ್ತಿಯಲ್ಲಿ
ಧವಳಗೊಳದ ಎದುರಿನಲ್ಲಿ
ಕಲ್ಲನೊಡೆದು ಮೂಡಿದ
ಜಗಕೆ ಬೆಳಕು ನೀಡಿದ

ಭರತನನುಜ ಬಾಹುಬಲಿಯು
ತ್ಯಾಗಫಲವ ಸಾರುತ
ಆದಿನಾಥ ಸುತನು ನಿಂತ
ಎಲ್ಲರನ್ನು ಹರಸುತ

ಮೊಗದ ತುಂಬ ಮಂದಹಾಸ
ಸೂಸಿ ಅವನು ನಗುತಿಹ
ಕಾಂತಿಯುಳ್ಳ ನೋಟಬೀರಿ
ಶಾಂತಮೂರ್ತಿ ನಿಂತಿಹ

ಕಲೆಯಾದ ಶಿಲೆ

ಬೀಗುತಿದೆ ಶಿಲೆ ಕಲೆಯಾದ ಹಮ್ಮಿನಲಿ
ಅಭಿಮಾನದ ಬಿಗುಮಾನ ತೋರುತಲಿ

ಕುಂಚದಲಿ ಬರೆದಂತೆ ಚೆಲುವಾಗಿ
ಅರಳಿ ನಗುವ ಸೂಸುತಿದೆ
ಕಾವ್ಯದಲಿ ಕೊರೆದಂತೆ ಭಾವಗಳ
ಸುರುಳಿ ಸೊಗಸಾಗಿ ಸ್ಫುರಿಸಿದೆ

ಎರಕ ಹೊಯ್ದಂತೆ ಮೇಣದಲಿ
ನಯವಾದ ನುಣುಪು
ಉಳಿಚಾಣಕೆ ಮೈಯೊಡ್ಡಿ
ಒರಟು ಶಿಲೆಯೀಗ ಒನಪು