ಅವಳು

ಅವಳೆ ನಾನೋ.....
ನಾನೇ  ಅವಳೊ.... ತಿಳಿಯದಂಥ ಘಳಿಗೆ
ಯಾರೊ  ಬಂದು  ಕುಳಿತ  ಹಾಗೆ  ನನ್ನ  ಹೃದಯದೊಳಗೆ
ಸಾಗರದೊಳೇಳುವ ಅಲೆಯೆಲ್ಲವೂ ದಡವ  ತೋಯುವ ಹಾಗೆ
ಮನದೊಳೆದ್ದ  ಬಯಕೆಯೆಲ್ಲ  ಹಾಡಾಗಿದೆ ಹೀಗೆ
ಮೌನದಾಚೆಗೂ ಮಾತು  ತೇಲಿ
ಹೊಡೆಯುತ್ತಿದೆ ಮನವು ಜೋಲಿ.....
ಹಾಡದೆ  ಉಳಿದ
ನನ್ನೆದೆಯ  ಭಾವಗೀತೆಗೆ  ಸ್ವರವಾಗಿಹಳು
ಬಿಡಿಸದೆ  ಉಳಿದ 
ಕನಸಿನ  ಚಿತ್ರಕೆ  ಬಣ್ಣವಾಗಿಹಳು
ಮನಸೆಂಬ ನಲಿವಿನ ಬತ್ತಳಿಕೆಯಲ್ಲಿ ಬಾಣವಾಗಿಹಳು
ಜೀವಕಳೆ  ನಂದಿಹ ಈ ಮನಕೆ ತಂಪನೆರೆದಿಹಳು

ಭಾವದ ಶಿಲ್ಪ

ಕಡೆದು ಕೆತ್ತಿದ ಶಿಲ್ಪವಲ್ಲ,
ಕೊರೆದು ಕೊಚ್ಚಿದ ಶಿಲ್ಪವಲ್ಲ,
ಉಳಿಯಿಂದ ಮೀಟಿ ತಿದ್ದಿದ ಶಿಲ್ಪವಲ್ಲ
ವಸಂತದಲಿ ಹೊಂಗನಸ ಕಾಣುವ,
ಆಷಾಡದಲಿ ನೋಯುವ ಶಿಲ್ಪ
ಬೇಸಿಗೆಯಲಿ ಬೇಯುವ,
ಮಳೆಯಲ್ಲಿ ತೋಯುವ ಶಿಲ್ಪ
ಭಾವದ ಬುತ್ತಿ ಹಿಡಿದು
ಬದುಕಿನ ಬದಿಯಲ್ಲಿ
ನವಕಾಮನೆಗಳ ಹೊತ್ತು ನಿಂತಿರುವ ಶಿಲ್ಪ

ತಬ್ಬಲಿ

ತಬ್ಬಲಿಯು ನಾ ತಬ್ಬು ಬಾ ಎಂದು ಕೈಚಾಚಿ ನಿಂತಿಹೆನು
ಬಾ ಜೀವವೇ ಒಮ್ಮೆ ಅಪ್ಪು ನನ್ನ
ನಿನ್ನ ಅಪ್ಪುಗೆಯಲಿ,
ನೋವ ಮರೆತು ನಲಿಯುವಾಸೆ
ಕಹಿಯ ಬಿಟ್ಟು ಸಿಹಿಯ ಸವಿಯುವಾಸೆ
ನಿನ್ನೆಲ್ಲ ಸಾಂತ್ವನವ ಎನಗೆರೆಯ ಬಾ
ಸತ್ತ ಪ್ರೀತಿಯ ಹೊತ್ತು ಮಸನದೆಡೆ ಹೊರಟಿರಲು
ಕಿತ್ತು ತಿನ್ನುವ ನೆನಪು ಕಾಡಿಹುದು ಮನದಲ್ಲಿ
ಎತ್ತಲಿಂದಲೋ ಬಂದು
ಮೆತ್ತನೆಯೆ ಕೈ ಹಿಡಿಯ ಬಾ.

ಯಾರು?

ಕಡಲ ನೀರ,
ಮುಗಿಲ ಕೊಡದಿ ಮೊಗೆವರಾರು
ಮೊಗೆದು ಮೊಗೆದು ಗಿರಿಗೆ ಸುರಿದು
ಹರಿವ ನೀರು ನದಿಯ ಸೇರೆ
ಕಡಲ ನೀರು ತುಂಬಿ ತುಳುಕೆ
ಮತ್ತೆ ಕೊಡದಿ ಮೊಗೆವರಾರು
ಮೊಗೆದ ನೀರ ತುಂಬಿ ತಂದು
ಕರೆವ ಗಿರಿಗೆ ಸುರಿವರಾರು
ಸುರಿದ ನೀರು ಹರಿಯುತಿರಲು
ನದಿಯ ದಾರಿ ತೋರ್ವರಾರು