ದೀಪದ ಹಾಡು

ಉರಿವ ದೀಪ ಹಾಡುತಿದೆ
ಬರಿಯ ಬೆಂಕಿ ನಾನಲ್ಲ
ಉರಿದು ಬೆಳಕ ನೀಡುತಿಹೆ
ಸುಡುವ ಚಪಲ ಎನಗಿಲ್ಲ

ಒಡಲ ತುಂಬ ಜೀವತೈಲ
ಮನದುಂಬಿ ನೀ ಎರೆಯೆ
ಇರುಳ ಹರಿದು ಬೆಳಕ ಸುರಿದು
ನಗುವ ಚೆಲ್ಲಿ ನಾ ಉರಿವೆ

ವಿರಹ ತುಂಬಿ ಪತಂಗ
ನಲಿಯಬಂದು ನನ್ನ ಸಂಗ
ಮಾಡಿಕೊಳ್ಳ ಹೊರಟಿದೆ
ತನಗೆ ತಾನೇ ಆಶಾ-ಭಂಗ

ಬೊಗಸೆಯೊಳಗೆ ಬೆಳಗಿ ನಾನು
ಮನೆಯ ತುಂಬಿ ಹರಸುವೆನು
ಸೊಗಸ ನೋಡಿ ನಲಿಯಿರಿ
ಮನಕೆ ಮುದವ ಕೊಡುವೆನು

ರಕ್ತ ತರ್ಪಣ

ಯಾರಿಗರ್ಪಣೆ ಈ ರಕ್ತ ತರ್ಪಣ 
ಎಂದು ಮುಗಿವುದೋ ಜಗದ ತಲ್ಲಣ 
ಏತಕಾಗಿ ಕಟ್ಟಿದೆ ಕಂಕಣ?
ಸುಡುಗಂಕಣ ರಣಕಂಕಣ…

ನೆತ್ತರರಿಯುತ್ತಿದೆ ಎತ್ತರದ ಬಾನಲ್ಲಿ ಹಾರಾಡಿ ಹದ್ದು 
ಎತ್ತ ನೋಡಿದರೂ ಗುಂಡು ಗಡಚಿಕ್ಕುವ ಸದ್ದು 
ಸತ್ತು ಬಿದ್ದ ಮುಗ್ದ ಜೀವಗಳಿಗೆ ಅಕಾಲಿಕ ಮುಕ್ತಿ 
ನಗುತಲಿದೆ ದುಷ್ಟರ ಅಟ್ಟಹಾಸದ ವಿಕೃತ ಶಕ್ತಿ 

ನೆತ್ತರೋಕುಳಿಯಲ್ಲಿ ತತ್ತರಿಸಿದ ಯಾರದೋ ಹೃದಯ 
ಇನ್ನೂ ಮಿಡಿಯುತ್ತಿದೆ ಚಿತ್ತಾರದ ಕನಸ ಸುಡುತ 
ಮೊರೆದು ಮೆರೆದಿದೆ ದುಷ್ಟರ ಅಟ್ಟಹಾಸ
ಮೆಟ್ಟಿ ನಿಂತು ಮುಗ್ದ ಮುಖದ ಮಂದಹಾಸ

ಯಜಮಾನಪ್ಪನ ಯಾತ್ರೆ

ಯಾತ್ರೆಗೋದ ಯಜಮಾನಪ್ಪ ಸಂಗ ಕಟ್ಕೊಂಡು
ಪಾತ್ರೆಪಗ್ದೆ ಉಣ್ಣಾಕ್ ತಿನ್ನಾಕ್ ಎಲ್ಲಾನ್ ತಕ್ಕಂಡು
ಬಾಯಿಗ್‌ಬಂದಂಗ್ ಬೈದಾಡಿ ಮಾನ ಕಳ್ಕಂಡು
ಮಾಂಸ ಮಡ್ಡಿ ಜಿಡ್ಡು ಜೋಳ ಎಲ್ಲಾನ್ ತಿನ್ಕ0ಡು

ಕಾವೇರೀಲಿ ನಿಂದು, ಯಮುನೆ ಚಿಮುಕುಸ್ಕ0ಡು
ಗಂಗೆಯೊಳಗೆ ಮಿಂದುಬಂದ್ರೆ ಪುಣ್ಯ ಬತ್ತಾದ್ ಅಂದು
ಮೈಯ್ಯೀನ್ ಕೊಳೆ ತಿಕ್ಕಿ ತೀಡಿ ಚೆನ್ನಾಗ್ ತೊಳ್ಕಂಡು
ಮನಸಲ್ಲಿರೋ ಲೋಭಾಮೋಹನಂಗೇ ಇಟ್ಕ0ಡು

ಉಸಾರ್ ತಪ್ಪಿ ಸತ್ತೋದ್ ಹೆಂಡ್ತಿ ಸಮಾಧಿ ಮಾಡ್ಬುಟ್ಟು
ಜೊತೇಲೋಗಿದ್ ನಾದ್ನಿ ಕತ್ತುಗ್ ತಾಳಿ ಕಟ್ಬುಟ್ಟು
ಮಾಡಿದ್ ತಪ್ಗೊಳ್ಗೆಲ್ಲ ಸಾವ್ರಾರ್ ಹರಕೆ ಹೊತ್ಕಂಡು
ಪಾಪ-ಪುಣ್ಯ ನೇಮ-ನಿಷ್ಠೆ ನದೀಲ್ ತೇಯ್ಕ0ಡು

ಸುಮ್-ಸುಮ್ಕೆನೆ ಊರೂರ್ ತಿರುಗಿ ನೆಮ್ದಿ ಕಳ್ಕಂಡ
ಮುಕ್ತಿ-ಮೋಕ್ಷ ಯಾತ್ರೇಲಿಲ್ಲ ಅಂತ ತಿಳ್ಕಂಡ
ನಮ್ಮೂರೂನ್ ದೇವ್ರೇ ನಮಗೆ ದೊಡ್ಡು ನ್ಕಂಡು
ವಾಪಸ್ ಬಂದ ಆಲ್ದಾಡಿ ಖಾಯ್ಲೇ ತಕ್ಕಂಡು

ನಮಿಪೆ ವಾಲ್ಮೀಕಿ

ವಂದನೆ ಅಭಿವಂದನೆ ಅದಿಕಾವ್ಯದ ಸೃಜನನೆ
ನಮಿಪೆ ನಿಮಗೆ ಭರತಖಂಡದ ಪ್ರಥಮ ಕವಿಯೇ 

ಬರೆದೆ ಮುನ್ನುಡಿ ಕವಿಯ ಕುಲಕೆ
ಹೊಳೆವ ಮಣಿಯು ಕಾವ್ಯ ಮುಕುಟಕೆ
ಮಡಿದ ಕ್ರೌಂಚಕೆ ಮಿಡಿದ ಋಷಿಯೆ
ಮಹತ್-ಕಾವ್ಯವ ಬರೆದ ಮುನಿಯೆ

ಲೋಕಮಾತೆಯ ಶೋಕ ಕಳೆದು
ನೊಂದಸೀತೆಗೆ ಆಸರೆಯನೆರೆದು
ರಾಮಸುತರ ಸಾಕಿ ಸಲಹಿದೆ
ದಿವ್ಯಪ್ರೇಮದಿ ಹರಸಿ ಬೆಳೆಸಿದೆ

ವಿಶ್ವಪೂಜಿತ ಗ್ರಂಥದಾಕರ
ವಲ್ಮೀಕದೊಡಲ ಅಮರ ಸಂತ
ಹಾಡಿಹೊಗಳಿದೆ ರಾಮ ಚರಿತೆಯ
ಜಗಕೆ ಅರುಹಿದೆ ಪುರುಷೋತ್ತಮನ ಕಥೆಯ

ಕಾಲದ ಹಾದಿ

ಕಾಲದ ಹಾದಿಯ ತುಂಬಾ ಹೂವು ಮುಳ್ಳು
ಕಾಣದ ನೊರೆಂಟು ತೀಕ್ಷ್ಣ ತಿರುವುಗಳು
ಬಂಧಿಸಿ ಬಿಡಿಸಿಕೊಳ್ಳುವ ಹಲವು ಬಂಧಗಳು
ಆದಿಯಿಲ್ಲದ ಅಂಟು ಅಂತ್ಯವಿಲ್ಲದ ನಂಟು

ಹುಟ್ಟಿಗೊಂದೂರು ಸಾವಿಗೊಂದೂರು
ನಡುವೆ ಬಂದವರೆ ನಮ್ಮವರು
ಹಾಡಿಗೆ ಜತೆಗೂಡಿ ಜಾರಿಕೊಂಡ ಮಿತ್ರರು
ದಾರಿ ತೊರೆದ ದಾಯಾದಿ ಶತ್ರುಗಳು

ಹೃದಯ ಕದ್ದವರು ಎದೆಗೆ ಒದ್ದವರು
ಎಲ್ಲವ ನೆಚ್ಚಿ ಬೆದೆಗೆ ಬಿದ್ದ ಬಯಕೆಗಳು
ನರಳಿ ಹೊರಳಿದ ನೆನಪುಗಳು
ಹೊಸಕಿದ ಕನಸಿನೊಡನೆ ಮಿಸುಕಿದ ಮನಸುಗಳು

ಕಾಲದ ಹಾದಿಯ ತುಂಬಾ ಹೂವು ಮುಳ್ಳು
ಕಾಲದ ಹಾದಿಯ ತುಂಬಾ ಹೂವು ಮುಳ್ಳು

ನಗುವ ಮಗು

ನಗುತಲಿ ಮಗುವು ಮಲಗಿದೆ ಇಲ್ಲಿ
ತಿಳಿಗಣ್ಣಲಿ ಜಗವನು ನೋಡುತಲಿ||

ಚರ್ವಿತಚರ್ವಣ ಚಹರೆಯೊಳಿಲ್ಲ
ಚಿಂತಾಕ್ರಾಂತ ಛಾಯೆಗಳಿಲ್ಲ
ಆಲೋಚನಾ ರಚಿತ ವ್ಯೂಹಗಳಿಲ್ಲ

ಕಾಣೆನು ಉಲಿವುದೊ ರಾಮಾಯಣವ
ಅರಿಯೆನು ಬೆರೆವುದೋ ತಾ ಭಾರತವ
ಗ್ರಹಿಸೆನು ಸಾರ್ವುದೊ ಗೀತೆಯ ಸಾರ

ದೈವತ್ವದೆಡೆಗೆ ನಡೆದೋಡುವುದೋ
ರಕ್ಕಸತನಕೆ ಎಡತಾಕುವುದೋ
ಸಂತರ ತೆರದಿ ಕಾಮನೆ ಗೆಲುವುದೊ

ನಗುತಲಿ ಮಗುವು ಮಲಗಿದೆ ಇಲ್ಲಿ
ತಿಳಿಗಣ್ಣಲಿ ಜಗವನು ನೋಡುತಲಿ||

ಬಾ ಪ್ರೇಮವೇ…

ನನ್ನ ಮನದಲಿ ನೂರು ಕನಸಿದೆ
ಎಲ್ಲ ಕನಸಲು ನೀನೆ ಕುಳಿತಿಹೆ
ನನ್ನ ಎದೆಯಲಿ ಒಂದು ಒಲವಿದೆ
ಒಲವ ಗೆಲುವಿಗೆ ನೀನೆ ಬೇಕಿದೆ

ಹೃದಯ ಮಿಡಿತಕೆ ನಿನ್ನ ನೆನಪಿದೆ
ಬಡಿತ ಬಡಿತವೂ ನಿನ್ನ ಹೆಸರ ಕರೆದಿದೆ
ಬಾ ಪ್ರೇಮವೇ ಜೊತೆಗೆ ಬಾಳುವ
ಏನೆ ಆಗಲಿ ಒಂದೆ ಎನ್ನುವ

ಕಣ್ಣನಿಟ್ಟು ನೀ ಕಣ್ಣಿನೊಳಗಡೆ
ಬಂದು ಸೇರಿಕೋ ಎದೆಯ ಗೂಡಿಗೆ
ಸೇರಿ ನಲಿಯುವ ಪ್ರೀತಿಯೂರಲಿ
ಕೂಡಿ ಬಾಳುವ ಪ್ರಳಯವಾಗಲಿ

ತಂಗ್ಯವ್ನ ಮದುವೆ

ಬಂಧುಬಳಗವೆಲ್ಲಾ ಒಂದಾಗಿ ನೆರೆದವರೇ
ಚಿಕ್ಕ ತಂಗ್ಯವ್ನ ಮದುವೇಗೆ|| ಬಂದವರೇ
ಚೆಂದಾದ ಹಾಡ ಹಾಡವರೇ

ಅತ್ತಿಗೆನಾದಿನಿ ಬೆಲ್ಲದಾರತಿ ತೆಗೆದು
ಗಲ್ಲವ ಹಿಡಿದು ನಗಿಸ್ಯಾರೆ|| ಮಧುಮಗಳ
ಬೆಲ್ಲಮಾತಲ್ಲಿ ನುಡಿಸ್ಯಾರೆ

ಭಾವಮೈದುನರೆಲ್ಲ ಬಾಳೆಕಂಬವ ತಂದು
ಬಾಗಿಲ ಚಪ್ಪರಕೆ ಕಟ್ಟವರೇ|| ನಗುನಗುತಾ
ಬಯಲ ತುಂಬೆಲ್ಲ ಕುಣಿದಾರೆ

ಹಿಂಡಿಂಡುಗೆಳತಿಯರು ಕಂಡು ಕಾಣೋರೆಲ್ಲ
ಗಂಡನ ಹೆಸರ ಕೇಳವರೆ|| ತಂಗ್ಯವ್ನ
ದುಂಡುಮೊಗದ ನಾಚಿಕೆ ನೋಡವರೇ

ತುಂಡುಹೈಕಳು ಬಂದು ತುಂಬಿದ ಪಂಕ್ತಿಗೆ
ಸಣ್ಣಕ್ಕಿ ಅನ್ನ ಬಡಿಸವರೇ|| ನೆಂಟರು
ತಿಂದುಂಡು ವೀಳ್ಯ ಮೆಲುತವರೇ

ನಿನ್ನವನಾದೆ

ಹೆರಳನು ಹಾರಿಸಿ
ಕೊರಳನು ಹೊರಳಿಸಿ
ಕಣ್ಣನು ಅರಳಿಸಿ ನೀ ಬಂದೆ

ನನ್ನನೆ ಮರೆತು
ನಿನ್ನೊಳು ಬೆರೆತು
ನಿನ್ನನೆ ನೋಡುತ ನಾ ನಿಂದೆ

ನೋಟವ ತೇಲಿಸಿ
ರೆಪ್ಪೆಯ ಮಿಟುಕಿಸಿ
ಓರೆಯ ನೋಟದಿ ನೀ ಕೊಂದೆ

ನೋಟಕೆ ನಿಲುಕಿ
ಕಣ್ಣೊಳು ಸಿಲುಕಿ
ನಿನ್ನವನಾದೆ ನಾ ಅಂದೆ

ಕಾವ್ಯದ ತಿರುಳು

ಕವಿ ಬರೆದ ಕಾವ್ಯದೊಳೇನಿಲ್ಲ ?
ಸರಸತಿಯ ಒಲವುಂಟು
ಶೃಂಗಾರ ಚೆಲುವುಂಟು
ತಾಯ ಮಮತೆಯ ನಲವುಂಟು
ಮೇರೆ ಮೀರ್ದ ಸಾತ್ವಿಕದ ಬಲವುಂಟು

ಬಿರಿದ ಕುಸುಮಗಳ ಘಮಲುಂಟು
ರಸಿಕತೆಯ ಅಮಲುಂಟು
ಕಂದನಾಡುವ ತೊದಲುಂಟು
ಮಿಗಿಲಾಗಿ ನಾಡಪ್ರೇಮವು ಮೊದಲುಂಟು

ಬತ್ತದ ಭಾವನೆಗಳಲ್ಲುಂಟು
ಚಿತ್ತದ ತಳಮಳಗಳಲ್ಲುಂಟು
ಹೊತ್ತಿ ಉರಿವ ರೋಷಾಗ್ನಿಗಳ ಅಳಲುಂಟು
ಮಿಕ್ಕುಮೀರಿ ಹರಿವ ಮನದ ತೊಳಲಾಟವಲ್ಲುಂಟು

ಮರಳಿ ಮಂಡ್ಯದ ಮಣ್ಣಿಗೆ

ಬಾರೋ ನಿನ್ನೀ ತೌರಿಗೆ
ಮಮತೆ ತುಂಬಿದ ಮಡಿಲಿಗೆ
ಸಿಹಿಯ ಹಂಚುವ ಊರಿಗೆ
ಮರಳಿ ಮಂಡ್ಯದ ಮಣ್ಣಿಗೆ

ಅಪ್ಪ ಬೈದ ನೆರಳಿದೆ
ಅಣ್ಣ-ತಮ್ಮರ ಹಂಗಿದೆ
ತಂಗಿ ಕಂಗಳ ಹೊರಳಿದೆ
ಅವ್ವನೊಲವ ಸುರುಳಿದೆ

ಒರಟು ಭಾಷೆಯ ನಲವಿದೆ
ಗೆಳೆಯನೆದೆಯಲು ಒಲವಿದೆ
ಗದ್ದೆಬದಿಯಲಿ ನೆನವಿದೆ
ಹಸಿರ ಪೈರಲಿ ನಿನ್ನುಸಿರಿದೆ