ಉರಿವ ದೀಪ ಹಾಡುತಿದೆ
ಬರಿಯ ಬೆಂಕಿ
ನಾನಲ್ಲ
ಉರಿದು ಬೆಳಕ
ನೀಡುತಿಹೆ
ಸುಡುವ ಚಪಲ
ಎನಗಿಲ್ಲ
ಒಡಲ ತುಂಬ ಜೀವತೈಲ
ಮನದುಂಬಿ ನೀ
ಎರೆಯೆ
ಇರುಳ ಹರಿದು
ಬೆಳಕ ಸುರಿದು
ನಗುವ ಚೆಲ್ಲಿ
ನಾ ಉರಿವೆ
ವಿರಹ ತುಂಬಿ
ಪತಂಗ
ನಲಿಯಬಂದು ನನ್ನ
ಸಂಗ
ಮಾಡಿಕೊಳ್ಳ
ಹೊರಟಿದೆ
ತನಗೆ ತಾನೇ
ಆಶಾ-ಭಂಗ
ಬೊಗಸೆಯೊಳಗೆ
ಬೆಳಗಿ ನಾನು
ಮನೆಯ ತುಂಬಿ
ಹರಸುವೆನು
ಸೊಗಸ ನೋಡಿ
ನಲಿಯಿರಿ
ಮನಕೆ ಮುದವ
ಕೊಡುವೆನು