ಬಾಡದ ಭಾವನೆ

ಭಾವನೆಗಳ ಬಿಂದಿಗೆಯ ಹಿಡಿದು
ನಿಂತಿರೆ ನಾನು,
ಕುದುರೆಯೇರಿ ಶರವೇಗದಿ ಬಂದ
ಗೆಳೆಯ ನೀನು
ನಿನಗರ್ಪಿಸುವೆ
ಈ ಭಾವನೆಯ ತಿಳಿನೀರ
ಕಲ್ಮಶವಿಲ್ಲ ಇದರೊಳಗೆ,
ಅಮೃತಕ್ಕಿಂತ ಪರಿಶುದ್ಧ
ಸ್ವೀಕರಿಸು ಬಹುದಿನಗಳ ಭಾವನೆಯ
ನಿರಾಕರಿಸದಿರು
ಒಲ್ಲೆಯೆಂದರೆ ಒಡೆವುದೆನ್ನ ಮನ
ತಂದಿರುವೆ ಎನ್ನ ಅಂತರಾಳದಲ್ಲಿ
ಬಾಯ್ತೆರೆದ ಬತ್ತದ ಭಾವನೆಗಳ
ನಿನ್ನೆಡೆಗೆ,
ಹೊಸಕಬೇಡ ಗೆಳೆಯ
ನೀ ಹೊಸಕಿದರೂ
ಬಾಡದ ಭಾವನೆಗಳಿವು
ನೆನಪಿರಲಿ

ಪುಟ್ಟ ಜೋಡಿ

ಪುಟ್ಟ ಗೂಡಿನೊಳು
ಚಿಕ್ಕ ಹಕ್ಕಿಗಳು
ಚೊಕ್ಕ ಹೃದಯದಿ
ಭಾವನೆ ಬೆರೆಸುತ
ಪ್ರೀತಿಯ ಎರೆಯುತ
ನೋವನು ಮರೆಯುತ
ನಲಿವನೆ ಮೆರೆಸುತ
ಗೆಳೆಯರ ನಗಿಸುತ
ಗೆಳೆತನ ನೆನೆಯುತ
ಮುದದಿಂದುಲಿಯುತ, ಸಮರಸವೀಯುತ
ನಲಿಯುವ ಪರಿಯದ, ಕಣ್ಣಲಿ ಕಾಣುತ
ಹಿಗ್ಗಿದ ಮನದೊಳು, ಹರಸುವೆ ನಿಮ್ಮನು
ಬಾಳಿರಿ ಬಾಳನು, ಬದುಕನು ಕಲಿಯುತ
ಬೆಳಗಿರಿ, ಪ್ರೀತಿಯ ಜ್ಯೋತಿಯ ನಲಿಯುತ

ಸವಿ ತಾ…

ನಡೆಯಲ್ಲಿ ಸವಿ ತಾ
ನುಡಿಯಲ್ಲಿ ಸವಿ ತಾ
ನೋಟದಲಿ ಸವಿ ತಾ
ಸ್ನೇಹದಲಿ ಸವಿ ತಾ
ಮಧುರ ನೆನಪುಗಳ ಸವಿಯುತಾ
ನಿನ್ನೆದೆಯಿಂದಿತರರೆದೆಗೆ ಸವಿ ತಾ ಸವಿತಾ
ಸವಿಯಿರಲು ನಿನ್ನೊಡಲೊಳು
ಸವಿಗಡಲಾಗುವುದು ಬಾಳು
ಸವಿಯ ಸವಿದವರೆಲ್ಲರೂ
ತೇಲುವರು ಸವಿಗಡಲೊಳು

ಅರಿಯೆ ನಿನ್ನ

ನಾ ಅರಿಯೆ ನಿನ್ನ ಮನದ ಸಾರ
ಅದು ಅಷ್ಟು ವಿಸ್ತಾರ
ನಿನ್ನ ಮನದೊಳುದುಗಿಹುದು
ಕಹಿಬೇವೋ, ಸಿಹಿಜೇನೋ?
ನನ್ನ ಹಾರೈಕೆಯಂತು ಮನಸಾರ
ನೀ ಹೋದರೂ
ನನ್ನ ಬಾಳಿಂದ ಬಹುದೂರ
ನಾನಂತೂ ಮರೆಯೆ ನಿನ್ನ
ಉಸಿರಿರುವ ತನಕ
ಬದುಕಲೊಬ್ಬಳೇ ಈ ತರದ ಗೆಳತಿ
ಇರಲಿ ಅಮರ
ಇದು ನನ್ನ ಹೃದಯದೊಳು ಹರಿಯುತಿಹ
ಹಾರೈಕೆಗಳ ಸಾಗರ

ಸುನಾಮಿ

ನನ್ನೆದೆಯಲೆದ್ದ ಸುನಾಮಿಯಲೆ
ನೀನು ಬಾಲೆ
ಮೂಲ ಕಂಪನ ನಾನಾದರೂ
ಅರಿಯೆ ನಿನ್ನ ಅಲೆಯ ನೆಲೆ
ಶರವೇಗದಿ ಬಂದೆ ನೀನು
ಕಣ್ತೆರೆಯುವಷ್ಟರಲ್ಲಿ
ಸಿಲುಕಿದ್ದೆ ನಿನ್ನಲೆಯಲ್ಲಿ ನಾನು
ನಾ ಕಟ್ಟಿದ್ದ ಸಾಮ್ರಾಜ್ಯವನೆಲ್ಲ ಕೆಡವಿ
ಕಟ್ಟಿದ್ದೆ ನೀ ಹೊಸ ಸಾಮ್ರಾಜ್ಯ ನನ್ನೆದೆಯಲ್ಲಿ
ನೀ ಸಹನೆಯ ಸುನಾಮಿಯೋ?
ಅಸಹನೆಯ ವಿಕೃತಿಯೋ
ಅರಿಯದಾಗಿದೆ ಎನಗೆ

ಕಣ್ಣ ನೀರು

ಕಣ್ಣಾಲಿಗಳಲರಿಯುತಿಹ ನೀರದು
ಬರಿಯ ನೀರಲ್ಲ
ದುಃಖದ ಮಡುವಿನಲ್ಲಿ
ಚಿಂತೆಯ ಸರಮಾಲೆಯಲಿ
ಮೋಸದ ಬಲೆಯಲಿ
ಸುಳ್ಳಿನ ಸೆರೆಯಲಿ
ದ್ರೋಹದ ನಡುವಲ್ಲಿ
ಸಿಲುಕಿದುದರ ಪ್ರತೀಕ
ನಾನಾಗಿ ಕರೆಯಲಿಲ್ಲ
ನೀನಾಗಿ ಬಂದೆ ನನ್ನ ಬಾಳಿಗೆ
ಏಕೆ?
ನಗುವಿನ ಅಮಲಿನಲ್ಲಿಯಲ್ಲದಿದ್ದರೂ
ಶಾಂತಿಯ ಮಡಿಲಲ್ಲಿ
ಮಲಗಿದ್ದ ಮಗುವಿನಂತಿದ್ದೆ
ನಾನು,
ಬಂದೆ ನೀ ಗದ್ದಲದ ದನಿಯಾಗಿ
ಪ್ರಿಯವಾಯಿತು ಮೊದಲು
ಅರ್ಥವಾಯಿತು ನಿನ್ನ ಮೋಸದ ಒಡಲು
ನೀ ನನ್ನ ತೊರೆದು ಹೋದರೂ
ನಿನ್ನ ಮರೆಯಬಹುದು
ನಿನ್ನ ಮೊಸದಾಟವನಲ್ಲ

ನವಸಂವತ್ಸರ

ಮೂಡುತಿಹ ದಿನಗಳಿವು
ನವ ಸಂವತ್ಸರದತ್ತ
ನೀ ಕಳೆದ ವರುಷವದು ಜಾತ್ರೆಯಲ್ಲ
ಅದುವೆ ಜೀವನ ಯಾತ್ರೆ
ನೆನಪಿರಲಿ ಕೊರಗಿರಲಿ
ಹಾಳುಗೆಡವಿದ ದಿನಗಳತ್ತ
ವಿವೇಕವಿರಲಿ
ಮುಂಬರುವ ವರುಷದತ್ತ
ಪಡೆದುಕೊಳ್ಳ ಹೊರಟಿಹೆ
ಮತ್ತೊಮ್ಮೆ ದಿನಗಳ ಅಕ್ಷಯಪಾತ್ರೆ
ಸದ್ವಿನಿಯೋಗಿಸು ನೀ
ಇದ ಬರೆಯೆ ನವಚರಿತ್ರೆ

ಭಾರತಾಂಬೆಯ ಪಾಡು

ಭಾರತಾಂಬೆಯ ಜರಿಯ ಸೀರೆಯ
ಹರಿದು ಹೊಲೆಯುತಿಹರು ಪಕ್ಕದ
ಇಂಗ್ಲಿಷ್ ಆಂಟಿಗೆ ಮಿಡ್ಡಿ, ಫ್ರಾಕು, ಸ್ಕರ್ಟುಗಳ
ಅವಳ ಮೈಮಾಟಕೆ ಬೆರಗಾಗಿ ಕೈ ಹಿಡಿದು
ಕರೆದು ತರುತಿಹರು ಸಿಂಹಾಸನಕೆ
ಹರಿದ ಸೀರೆಯ ಕಿತ್ತ ಮಕ್ಕಳ ಕಂಡು
ಮರುಗುತಿಹಳು, ಮೈ ಮುಚ್ಚುತಿಹಳು ಅಳುದುಳಿದ
ಚಿಂದಿ ಆಯ್ದು ಭಾರತಾಂಬೆ
ಒಮ್ಮೆ ಏಕ ಸಾಮ್ರಾಜ್ನಿಯಾಗಿ ಆಳಿದ
ವೀರ ಮಕ್ಕಳ ತಾಯಿಗೇಕೆ
ಇಂತಹ ಮರಿಮಕ್ಕಳ, ಮೊಮ್ಮಕ್ಕಳ ಜನನ
ಅಯ್ಯೋ ಭಾರತಾಂಬೆಯ ಕುಡಿಗಳೇ
ಇನ್ನಾದರೂ ಎಚ್ಚೆತ್ತುಕೊಳ್ಳಿ, ರಕ್ಷಿಸಿ ನಿಮ್ಮ ತಾಯಿಯ
ಮಾನ, ಗೌರವಗಳ ನಿಮ್ಮ ಪೂರ್ವಜರಂತೆ

ಪ್ರತಿಭಾ ಪಲಾಯನ

ನಿನ್ನೆ ರಾತ್ರಿ ಏಕಾಂತದಲಿ
ಬೆಚ್ಚನಾ ಮಲಗಿರಲು
ಮತ್ತದೇ ನೆನಪು ಅದೇ ಅಳಲು
ನಾ ಅವಕಾಶವಂಚಿತ
ತುಂಬಿದೆ ನೀರ್ಕಂಗಳಲಿ ಸಿಡಿಯುತಿದೆ ಎದೆ
ನೆನೆನೆನೆದು ಕೊರಗಿ ಮರುಗುತಿಹೆನು
ಕೈಬಿಟ್ಟ ಆ ದಿನಗಳನು
ಗೆಳೆಯರೆಷ್ಟೋ ಹೇಳಿದರು ಹೋದರು ವಿದೇಶಕ್ಕೆ
ನನಗೋ ದೇಶಾಭಿಮಾನದ ನೆಪ
ನಾ ಗಳಿಸಿದ್ದೆ ಹೈಸ್ಕೋರು, ಯಾರಿದ್ದಾರೆ ಕೇಳೋರು
ಇದು ಬರೀ ರಾಜಕೀಯದ ಕೆಸರು
ಹೀಗಿದ್ದ ಮೇಲೆ
ಕಿವಿಯ ಮೇಲೆ ಬೀಳಲೇ ಬೇಕಲ್ಲ
ಪ್ರತಿಭಾ ಪಲಾಯನದ ಹೆಸರು

ಅತಿಯಾಸೆ

ನನ್ನೆದೆಯ ಕಟ್ಟೆಯಲಿ
ಆಸೆಯೆಂಬ ಚಿಲುಮೆಯೇ ಬತ್ತಿತ್ತು
ಬತ್ತಿರಲು ಬಂದ ನನ್ನಾಸೆ ಹಮ್ಮೀರ
ನನ್ನ ಗೆಣೆಕಾರ
ನನ್ನ ಧಮನಿ ಧಮನಿಯಲಿ ಮಿಳಿತಗೊಂಡಿತ್ತು
ಅವನ ಆ ಗಂಭೀರ,
ಮುಗ್ಧ ಮುಗುಳ್ನಗೆ
ಕಂಡು ಅವನ ನಗುವಿನ, ನಡೆಯ, ಮಾತಿನ, ಚಿತ್ತಾರ
ಮಾಡಿತೆನ್ನ ಮನ ಅವನಿಗಾಗಿ ಚೀತ್ಕಾರ
ತುಂಬಿತು ನನ್ನೆದೆಯ ಕಟ್ಟೆ ಮತ್ತೆ ಆಸೆಯ
ಸುರಿಮಳೆಯಿಂದ
ಅತಿಯಾಸೆ ಆಯಿತು ಪ್ರವಾಹ
ಕೊಚ್ಚಿಕೊಂಡೊಯ್ಯಿತು ಅವನ
ಮಾಡಿತು ನನ್ನೊಂದು ತೀರ,
ಅವನೊಂದು ತೀರ
ಮತ್ತೆ ಬರಿದಾಗಿದೆ ನನ್ನೆದೆಯ ಕಟ್ಟೆ
ತುಂಬೀತೆ ಅದು?
ಕೊನೆಗೊಂದರಿತೆ ಅತಿಯಾಸೆಯಿಂದಲೇ ನಾ ಕೆಟ್ಟೆ

ಮೇಘದ ಸೊಬಗು

ಹೊನ್ನ ಬಣ್ಣದ ಚಿತ್ತಾರ
ಮೂಡಿಹುದು ಗಗನದಲಿ
ಅದ ನೋಡಿ ಹರುಷದಿ
ತೆಲಿಹುದು ಮನ ಉಲ್ಲಸದಲಿ
ಸರಿಯದಿರು
ಹೊನ್ನ ಬಣ್ಣದ ಮೇಘ
ಮರೆಯಲಾರೆ ನಾ ನಿನ್ನ ಸೊಬಗ
ನನ್ನ ಕಣ್ತಣಿಸುವಾ ತೆರದಿ
ತಣಿಸು ಬಾ ಧರೆಯ
ನಿನ್ನಂದ ನೋಡುತಿರೆ ಬರುವುದು
ಮುಪ್ಪಿಗೂ ಹರೆಯ

ಜನುಮ ದಿನ

ತಂತನನ ತಂತನನ
ಕುಣಿದಿಹುದು ನನ್ನ ಮನ
ತಂದಿಹುದು ಸಂತಸವ
ಈ ನಿನ್ನ ಜನನ
ಬೆಚ್ಚದಿರು ಬೆದರದಿರು
ಹೆಣ್ಣೆಂದು ಜಗದೊಳಗೆ
ನಗುವಿರಲಿ ನಲಿವಿರಲಿ
ಈ ನಿನ್ನ ಮೊಗದೊಳಗೆ
ತವರಲ್ಲಿ ತಾಯಾಗಿ
ಇನಿಯನಿಗೆ ಜೊತೆಯಾಗಿ
ಪಕ್ವವಾಗಲಿ ಬಾಳು
ಸಿರಿವಂತೆಯಾಗಿ
ಸಮಪಾಲು ಸಮಬಾಳು
ದೊರೆಯುವುದು ನಿನಗಿಲ್ಲಿ
ಬದುಕಿ ಬಾಳು ನೀ
ಕಿರುನಗೆಯ ಚೆಲ್ಲಿ

ಮರೆಯೇ ಗೆಳತಿ

ನೀ ಮರೆವುದೇ ಲೆಸೆನ್ನ ಗೆಳತಿ
ನನ್ನ ಬಾಳಿಗೆ ಬರುತಿಹಳು
ಬೇರೊಬ್ಬ ಒಡತಿ
ನಿನ್ನ ಪಾಲಿಗೆ,
ಕರಗುತಿಹ ಚಂದ್ರಮ ನಾನು
ಕೊರಗುವ ನೈದಿಲೆಯಾಗದಿರು ನೀನು
ನಾವಾಡಿದ ಪ್ರೇಮದಾಟವ ಮರೆ
ಹೊಸ ಬದುಕಿಗೆ ಹೋಗು ಮೊರೆ
ನನ್ನೊಳೇನಿದೆ ನೀ ಬಯಸುವುದು
ಇದ್ದರೂ ನನ್ನ ಕ್ಷಮಿಸು

ಮೊದಲ ರಾತ್ರಿ

ಹೂವು ಹಣ್ಣು ಚಂದ್ರಮಂಚ
ಗಂಧದೊಡನೆ ತಂಪು ಗಾಳಿ
ಪ್ರಣಯರಸಕೆ ಕರೆದಿವೆ
ನಮ್ಮಿಬ್ಬರ ಮೆರೆಸಿವೆ

ಅಗುಳಿ ಹಾಕಿ ಕದಕೆ ನಾನು
ಮೆಲ್ಲ ಬಳಿಗೆ ಸರಿದೆನು
ಮೆದುವ ಕೈಯ ಹಿಡಿದು ಅವಳ
ಪಕ್ಕದಲ್ಲೆ ಕುಳಿತೆನು

ತಲೆಯ ಮೇಲೆ ಸೆರಗು ಸರಿಸಿ
ಗಲ್ಲವನ್ನು ಹಿಡಿದು ನಾನು
ಅವಳ ಹೆಸರ ಕೇಳಿದೆ
ಬೇರೆ ಏನು ಹೊಳೆಯದೆ

ಇನ್ನು ನಾಚಿ ನಗುವ ಬೀರಿ
ಕಣ್ಣ ನೋಟ ಕೆಳಗೆ ಇಳಿಸಿ
ತಿಳಿಯದೇನು? ಎಂದಳು
ಮೆಲ್ಲ ಹೆಸರ ನುಡಿದಳು

ಬೆನ್ನ ಮೇಲೆ ಬೆರಳ ಗೀರಿ
ಕಣ್ಣನೋಟ ಬೆರೆಸುತ
ತನುವ ಬಳಸಿ ಕುಳಿತೆನು
ಮುಂದೆ ಹೇಳಲಾರೆನು

ಇರುಳು ಮೆಲ್ಲ ಸರಿಯಿತು
ಕೋಳಿ ಕೂಗ ಹತ್ತಿತು
ಮೆಲ್ಲ ಮುಸುಕು ತೆರೆಯೆ ನಾನು
ಬೆಳ್ಳಿ ಬೆಳಕು ಹರಿಯಿತು

ಪ್ರಖರ ಕಿರಣ ಕಣ್ಣ ಹೊಕ್ಕೆ
ಮತ್ತೆ ಹೊದ್ದು ಮಲಗಿದೆ
ಮಸುಕು ಮಬ್ಬು ಹೀಗೆ ಇರಲಿ
ಎಂದುಕೊಂಡು ಮುದುಡಿದೆ

ದೀಪದ ಹಬ್ಬ

ಹೊಸತು ಬೆಳಕ ಹೊತ್ತು ತರಲಿ
ದೀಪದೀ ಹಬ್ಬವು
ತೊಡೆದು ತೊಳೆದು ಅಂಧಕಾರ
ತರಲಿ ಹರುಷ ನಿತ್ಯವು

ಹಾಲ ಬೆಳಕನೆಲ್ಲ ಚೆಲ್ಲಿ
ಹೂವ ಕುಂದ ಅರಳಲಿ
ಮನದ ತುಂಬ ಹೂವಿನಂತ
ಚೆಲುವ ನಗುವು ಚಿಮ್ಮಲಿ

ಮನೆಯ ತುಂಬ ನೀತಿಯೆಂಬ
ತೀಕ್ಷ್ಣ ಚಕ್ರ ತಿರುಗಲಿ
ಎದೆಯ ಬಾಗಿಲಲ್ಲಿ ಅದುವೆ
ರಂಗವಲ್ಲಿ ಬಿಡಿಸಲಿ

ಕಯ್ಯಲಿರುವ ಸುರುಬತ್ತಿ
ಉರಿದು ಬೆಳಕ ನೀಡಲಿ
ಮಿನುಗುತಿರುವ ತಾರೆ
ಎಲ್ಲ ಕಂಗಳಲ್ಲಿ ಹೊಳೆಯಲಿ

ಪ್ರೀತಿಯ ಸಂದೇಶ ಹೊತ್ತು
ಸೂರಬಾಣ ಜಿಗಿಯಲಿ
ಎಲ್ಲ ಮನಕೆ ಇದುವೆ
ಒಂದು ಸ್ನೇಹ ಸೇತುವಾಗಲಿ

ದ್ವೇಷವೆಂಬ ಮತಾಪು
ಮನದ ಮೂಲೆಯಲ್ಲೆ ಸಿಡಿಯಲಿ
ಅನ್ಯ ಮನಕೆ ಅದರ ಕಿಡಿಯು
ಎಂದೂ ಸೋಕದಿರಲಿ

ಶಾಂತಿ ಕರುಣೆ ಮಮತೆ
ಬೆರೆತ ಹೊನ್ನ ದೀಪ ಬೆಳಗಲಿ
ಜಾತಿ ಮತವ ಮೀರಿ ಬೆಳಕು
ಎಲ್ಲ ಜಗಕು ಹರಡಲಿ

ದುಗುಡ ನೀಗಲಿ...

ಮನದ ಈ ಮುಗಿಲಿನಲ್ಲಿ
ದುಗುಡದೀ ಮೋಡ ತೇಲಿ
ತೇಲಿ ತೇಲಿ ಮೈಲಿ ದೂರ
ಚೆಲ್ಲದಿಹುದು ಹನಿಯನು

ಹೆಪ್ಪುಗಟ್ಟಿದೆಲ್ಲ ನೋವು
ಅಡಗಿಹುದು ಮುಗಿಲೊಳು
ಎದೆಯ ತುಂಬ ಬರಿಯ ಬೇವು
ಬಾಳಿನೀ ಕಡಲೊಳು

ಮೋಡದೊಡಲ ನೋವ ಭಾವ
ಒಡೆದು ಹೊರಗೆ ಇಳಿಯಲಿ
ತೊಡೆದು ಹೋಗಲೆಲ್ಲ ನೋವು
ನನ್ನ ಕಣ್ಣ ನೀರಲಿ

ಬದುಕುವಾಸೆ ಹೊಸೆದು
ಮತ್ತೆ ಹೊಚ್ಚ ಹೊಸತು ಕನಸನು
ತಿರುಗಿ ನಲಿವು ಬರುವುದೆಂಬ
ಆಶೆಯಲ್ಲಿ ಇರುವೆನು

ಎಂದೊ ಎಲ್ಲೊ ಯಾರೋ ಬಂದು
ಸೇರಲೆನ್ನ ಜೀವವ
ಅರಿತು ನನ್ನ ಬಾಳಿನೆಲ್ಲ 
ಮುಕ್ತವಾದ ಭಾವವ

ಜೇನಿಗಿಲ್ಲ ಮೈಲಿಗೆ

ರುದ್ರ ಭೂಮಿಯ ಸುಮವು
ಪರಿಮಳವ ಸೂಸಿರಲು
ಮುತ್ತಲಾರವೇ ಜೇನ ಹಿಂಡು
ಬಾರಲಾರವೇ ಪತಂಗದ ದಂಡು
ಸುಮದೊಳಿರುವ ಮಕರಂದಕೆ
ಯಾವ ಮೈಲಿಗೆ ಹೇಳು
ಮಧುವ ಹೀರುವ ಇವಕೆ
ಇನ್ನಿಲ್ಲದ ತವಕ ಕೇಳು

ಬಯಸಲಿಲ್ಲ ಸುಮವು ತಾನು
ಸೇರಲೆಂದು ಶಿವನ ಶಿರವ
ಕೊರಗಲಿಲ್ಲ ಹೇರಿ ಕುಳಿತು
ಸತ್ತ ಶವದ ಹೀನ ಮುಡಿಯ
ಹೂವನರಸಿ ಬರುವ ಭ್ರುಂಗಕಿಲ್ಲ
ಎಳ್ಳಿನಷ್ಟು ಮೈಲಿಗೆ
ಮಧುವ ಹೀರಿ ಹಾರುತಿಹುದು
ಮತ್ತೊಂದು ಬೇಲಿಗೆ
ಹೀರಿ ತಂದ ಜೇನನೆಲ್ಲ
ಸುರಿದು ತನ್ನ ಗೂಡಿಗೆ
ಮತ್ತೆ ಹೋಗುತಿಹುದು ಜೇನು
ಹುಡುಕಿ ತರಲು ಕಾಡಿಗೆ
ಜೇನಗೂಡ ಸುಟ್ಟು ಸುಲಿದು
ಕದಿಯುತಿಹನು ಮಾನವ
ತೆಗೆದು ಕೋಟಿ ಕೋಟಿ ಜೇನ
ಪುಟ್ಟ ಪುಟ್ಟ ಪ್ರಾಣವ
ತಂದ ಎಲ್ಲ ಜೇನ ಹನಿಗೆ
ಮಾಡುತಿಹನು ನಿಯಮವ
ಮುಟ್ಟ ಹೋದರಿತರರೆಲ್ಲ
ಮಡಿ ಮೈಲಿಗೆ ಎನ್ನುವ
ಮಡಿಯಿಂದಲಿ ತಂದು ಜೇನ
ಲಿಂಗ-ಮೂರ್ತಿಗಭಿಷೇಕವ ಗೈವರು
ಶವದ ಮುಡಿಯ ಹೂವ ಹನಿಯು
ಬೆರೆತಿರುವುದ ಕಾಣರು

ಮೊಗವ ತೋರೆ…

ಭಿನ್ನವಾದ  ನಿನ್ನ  ರೂಪ
ಮೂಡಿ  ನನ್ನ  ಮನದಲಿ
ಕಾಡುತಿಹುದು  ನನ್ನನೀಗ
ನಟ್ಟ  ನಡುವೆ  ಹಗಲಲಿ

ಊರ ಜಾತ್ರೆ ಮಧ್ಯದಿ
ನಿನ್ನ ನೋಡ ಬಂದರೆ
ಹೂವ ಬುಟ್ಟಿ ಅಡ್ಡ ಹಿಡಿದು
ಬೆರಳ ಮುಂದು ಮಾಡಿದೆ
ಮೊನ್ನೆ ನಸುಕು ಮಬ್ಬಿನಲಿ
ಮೊಗವ ಮರೆಸಿ ಓಡಿದೆ
ದೀಪದೊಂದು ಹಬ್ಬದಲಿ
ಜಡೆಯ ಮಾತ್ರ ತೋರಿದೆ

ಬಾರೆ ನೀರೆ ಮೊಗವ ತೋರೆ
ನೋಡಿ ಸವಿವೆ ಚೆಲುವನು
ಕಣ್ಣ ತುಂಬ ಕಾಣುವಾಸೆ
ನಿನ್ನ ಪೂರ್ಣರೂಪನು