ನಲ್ಲ ಬರುವನೆಂದಿಗೆ?

ಪೋರನುಡಿದ ಚೋರನುಡಿಗೆ
ಮೋರೆಯಾಯ್ತು ಬಿಂದಿಗೆ
ಅವನ ಗುಂಗಿನಲ್ಲೆ ಅವಳು
ತಲೆಯ ಕೊಟ್ಳು ದಿಂಬಿಗೆ

ವಾರವಾಯ್ತು ತಿಂಗಳಾಯ್ತು
ಸುದ್ದಿಯಿಲ್ಲ ಅವನದು
ಅವನ ಕೂಡ ಕಳೆದ
ಎಲ್ಲ ಕ್ಷಣದ ನೆನಪು ನಿಲ್ಲದು

ನೀರ ಕೇಳಿ ಬಂದ ಅವಗೆ
ಕೊಟ್ಟಳಂದು ತಂಬಿಗೆ
ತನ್ನ ಕೈಯ ಹಿಡಿದೆ
ಹಿಡಿವನೆಂಬುದೊಂದೇ ನಂಬುಗೆ

ಸುತ್ತಿ ಸುಳಿದು ಬರುತಲಿದ್ದ
ಅಂದು ಗಳಿಗೆ ಗಳಿಗೆಗೆ
ಸುಳಿವೆ ಇಲ್ಲ ಎಲ್ಲಿ ಹೋದ
ನಲ್ಲ ಬರುವನೆಂದಿಗೆ?

ಕಾಸಿಗಲ್ಲ ಕವಿತೆ

ಮೂರು ಕಾಸು ಸಿಗುವುದಿಲ್ಲ
ಏಕೆ ಬರೆವೆ ಕವಿತೆ?
ಎಂದು ಕೆಳುವವರಿಗಾಗೆ
ನನ್ನ ಈ ಕವಿತೆ

ಕೇಳಿರೆಲ್ಲ ಗೆಳೆಯರೇ
ತಿಳಿಯಿರೆಲ್ಲ ಗೆಳತಿಯರೆ
ಕಾಸಿಗಾಗಿ ಬರೆಯಲಿಲ್ಲ
ನಾನು ಎಲ್ಲ ಕವಿತೆ
ಇದುವೇ ಮನದ ಒಡಲಿನಿಂದ
ಮೂಡಿ ಬಂದ ಒರತೆ

ಮನಸು ತುಂಬಿ ಬಂದಾಗ
ನೋವ ನುಂಗಿ ನಕ್ಕಾಗ
ಹೃದಯ ತುಂಬಿ ಅತ್ತಾಗ
ಎದೆಯಲೇನೋ ಹೊಸದು ರಾಗ
ಮೂಡುವುವು ಕವನ ಕವಿತೆ
ಇವುಗಳೆಲ್ಲ ಮನದ ಚರಿತೆ

ಮುದ್ದು ಮಗಳು

ನಲಿವ ದೇಹ
ಹೊಳೆವ ನೇಹ
ಅವಳ ಮೇಲೆ ನನ್ನ ಮೋಹ

ಅವಳೆ ಒಲವು, ಅವಳೆ ಚೆಲುವು
ಅವಳೆ ಬಾಳ ಗೆಲುವು
ಅವಳು ಜೊತೆಗೆ ಇರಲು ಹೀಗೆ
ಮರೆವೆ ನನ್ನ ಎಲ್ಲ ನೋವು


ಎದೆಯನೇರಿ ಆಡುತಿಹಳು
ನೋವೆ ಇಲ್ಲ ನನಗೆ
ಅವಳ ಬಿಟ್ಟು ಇರೆನು ನಾನು
ಒಂದೇ ಒಂದು ಘಳಿಗೆ

ಪುಟ್ಟ ಪಾದ ಹೋಲುತಿತ್ತು
ಬಂಗಾರದ ಮೀನು
ತೂಗಿ ತೂಗಿ ಮಿನುಗುತಿತ್ತು
ಕಿವಿಯಲಿದ್ದ ಹೊನ್ನು


ಪುಟ್ಟ ಕಂದ ಅಂದು ಅವಳು
ಕೈಯ ಹಿಡಿದು ನಡೆಸಿದೆ
ಎಡವಿ ಬಿದ್ದ ಅವಳ
ನೋವ ನಾನು ಕೂಡ ನುಂಗಿದೆ

ಆಡಲೆಂದು ಹೊರಗೆ ಇರಲಿ
ಓದಲೆಂದು ಒಳಗೆ ಇರಲಿ
ನನ್ನ ಕಾವಲಿದ್ದೆ ಇದೆ
ಎಲ್ಲಿ ಹೋದರವಳು ಅಲ್ಲಿ

ಹರಸುವೆನು ನಿತ್ಯ ನಾನು
ಅವಳ ಬಾಳು ಬೆಳಗಲಿ
ನನ್ನ ಮುದ್ದು ಮಗಳಿಗೆಂದು
ಬೇರೆ ಏನು ತಾನೆ ನೀಡಲಿ

ಅಳಿದ ಒಲವು

ಮನವು ಬರೆದ ಒಲವನೆಲ್ಲ
ಅಳಿಸುತಿದೆ ಕಣ್ಣ ನೀರು
ಅಳಿದು  ಇಳಿಯುತಿರುವ  ಮಸಿಯು
ತಾಳುತಿದೆ   ಅವಳ  ರೂಪ

ಹೊಳೆವ  ಕಣ್ಣು  ಕಾಂತಿ ಬೀರಿ 
ನಗುತಲಿದೆ ನನ್ನ ಅಳಿಸಿ
ನೆನೆದು ಇನಿಯಳೊಮ್ಮೆ ಮನದಿ
ತಾಳಲಾರೆ  ಬೇಗುದಿ

ಚೆಲುವ ನಿನ್ನ ಕಿರು ನಗೆ
ಸೋಕಿ ನನ್ನ ನೋವಿಗೆ
ಇರಿಯುತ್ತಿದೆ ನನ್ನೆದೆ
ಎಲ್ಲಿ ಹೋದೆ ನಿಲ್ಲದೆ

ನೀನೆ ಜೀವ ನಾನೇ ದೇಹ
ಎಂದು ಅಂದು ಹೇಳಿದೆ
ಉಸಿರೆ ಹೋಗುತಿಹುದು ಇಂದು
ಮರುಗದೇನೆ ನಿನ್ನೆದೆ

ಮೌನದ ಪ್ರೀತಿ

ನಿನ್ನ  ಸ್ನೇಹದೊಳೊಲವ 
ನಾ  ಬಲ್ಲೆ  ಗೆಳತಿ
ನಯನದ  ಮಡುವಲ್ಲಿ
ಅಡಗಿಹುದು  ಪ್ರೀತಿ

ಸೂಜಿಗಲ್ಲಿನೋರೆನೋಟ
ಕೆಣಕುತಿಹುದು ನನ್ನ ಮನವ
ತುಟಿಯಂಚಿನ ಕಿರುನಗೆಯು ಹೇಳುತಿದೆ ಎಲ್ಲ
ನೀನಿದ್ದರೂ  ಮೌನವಾಗಿ

ನೀ  ಅಂದು  ನಾಚಿ  ನುಡಿದ  ಮುತ್ತು
ಬಾಚಿ  ತಬ್ಬಿತು  ನನ್ನ
ನಿನ್ನ ಈ ಸವಿನುಡಿಯ
ಕೇಳಲೆಂತು ಚೆನ್ನ

ಸೂಸಿಹುದು ಲ್ಲವನು
ನಿನ್ನ ಹೊಳೆವ ಕಣ್ಣು
ನಿನ್ನ ಹೊಗಳ ಹೊರಟರೆ
ಬಾಯಿ ಬಾರದಿನ್ನು

ಬಾರೆ ಗೆಳತಿ ಹೃದಯದೊಡತಿ
ಜೊತೆಗೆ ನಕ್ಕು ನಲಿಯುವ
ಬಾಳ ಕ್ಷಣವನೆಲ್ಲ ನಾವು
ಒಟ್ಟಿಗೇನೆ ಕಳೆಯುವ

ಬೇಸರದ ಕಡಲು

ಬೇಸರದ ಕಡಲಾಗಿದೆ ಜೀವನ
ತಳಮಳದ ಮಡುವಾಗಿದೆ ಮನ
ಕಡಲೊಳಲೆಯುತಿಹ ಅಲೆಗಳಿವು
ನೆಲೆ ನಿಂತಾವೇನು?
ಮಡುವೊಳಿಹ ಸುಳಿಗಳವು
ಸೆಳೆದೊಯ್ಯವೇನು?

ಅಲೆದಲೆದು ಬಳಲಿದಾ ಅಲೆಗಳವು
ತೀರದಂಚಿಗೆ ಮರಳಿ ಬರುವುವು
ತೀರದಾ ಆಸೆಯನೊತ್ತು
ಬಂಡೆಗಪ್ಪಳಿಸಿ  ಜಲ್ಲೆಂದು ಪುಟಿದು
ಮರಳಿ ಸೇರುವುದು ಕಡಲ

ಸುಳಿಗಳಿಹ ಮಡುವದುವೆ ಸಿಕ್ಕ ವಸ್ತುವನಿಡಿದು
ಕಡೆದು ಮಂಥನವ ಮಾಡಿ
ತಳ್ಳುವುದು ಪಾತಾಳಕ್ಕೆ
ಮರಳಿ ಬಾರದಾ ಲೋಕಕ್ಕೆ

ನಂಬಬಹುದೇನೇ?

ನಂಬಬಹುದೇನೇ ತಂಗಿ
ನರಮನುಷರ ನಂಬಬಹುದೇನೇ?
ನರನರ ಮಿಡಿತಕು ನೂರಾರು ತರಹ
ನಖಶಿಖಾಂತದಿ  ಏನೆಲ್ಲ ಕಲಹ
ನಳನಳಿಸುವ ಕಣ್ಣೊಳು ನವಿರಾದ ಕುತಂತ್ರ
ನವಿಲ ನೃತ್ಯದ ತೆರದಿ ಎಂತೆಲ್ಲ ತಂತ್ರ
ನಡೆವ ಹಾದಿಗೆ ಮುಳ್ಳೆಸೆವ
ನಡುನಡುವೆ ಅಲ್ಲಗಳೆವ ಇವರ 
ನಂಬಬಹುದೇನೇ
ನಂದಾದೀಪವ ನಂದಿಪ ಜನರ
ನಂದನವನವನೆ ನುಂಗಿಪ
ನಯವಂಚಕರ
ನವರಸದಲಿ ಮಿಂದಿಪ ಇವರ
ನವರಂದ್ರದಲು ನಾರುವ ಇವರ
ನಂಬಬಹುದೇನೇ?
ನಂಬದಿರು
ನಂಬಿ ಕೊರಗದಿರು
ನಂಬಿ ನಿನ್ನ ನೆಮ್ಮದಿಯ ನೀನೆ ಕೆಡಿಸದಿರು
ನಂಬಬೇಡವೇ ತಂಗಿ 
ನರಮನುಷರ ನಂಬಬೇಡವೇ