ಯೋಧನ ಅಳಲು

ಯುದ್ದದ್ ಕರೆ ಬಂದಿತ್ತಂದು
ಎದ್ದು ನಿಂತಿದ್ದೆ
ಮಲ್ಗಿದ್ ಕಂದನ ಮುಖ ನೋಡಿ
ಹಂಗೆ ಹೊಂಟಿದ್ದೆ

ಗೆದ್ಬಾ ಅಂತ ಆರತಿ ತೆಗೆದು
ಹಣೆತುಂಬ ತಿಲಕ ಇಟ್ಟಿದ್ಲು
ಗುಂಡಿ ಬಿಚ್ಚಿದ್ ಅಂಗಿ ಸರಿಸಿ
ಎದೆಮ್ಯಾಲ್ ಮುತ್ತೊಂದ್ ಒತ್ತಿದ್ಲು

ನಾನ್ ನಿನ್ನೆದೆಯಾಗ್ ಬೆಳಕಾಗಿರ್ತೀನಿ
ಅಂತ ಅಂತಿದ್ಲು
ಹೇಳ್ದೆ ಕೇಳ್ದೆ ದೀಪ ಆರಿಸಿ
ಸುಮ್ನೆ ಹೊಂಟೋದ್ಲು

ಬುಟ್ಟೋಗ್ಬ್ಯಾಡ ನನ್ನ ಅಂತ
ಕಣ್ತುಂಬ ಅತ್ತಿದ್ಲು
ಅವಳಿಲ್ಲದ್ ಮನೆಯೀಗ
ಬರೀ ಕಗ್ಗತ್ಲು

ಸಾವುನ್ ಗೆದ್ದು ನಾನೇ ಬಂದೆ
ಅವಳೇ ಮನೆಲಿಲ್ಲ
ವೈರೀನ್ ಕೊಂದಾಗಿನುತ್ಸಾಹ
ಎದೆಯೊಳಗ್ ಉಳ್ದಿಲ್ಲ

ಬರಿಯ ಬೊಗಸೆ

ನಲ್ಲೇ ನಿನ್ನ ಲಲ್ಲೆ ಮಾತು
ಜಲ್ಲೆ ಕಬ್ಬು ಸಿಗಿದಂಗಿತ್ತು
ಒಲ್ಲೆ ಎಂದರು ನೀಡಿದ ಮುತ್ತು
ಕೆನ್ನೆ ಕೆಂಪು ಮಾಡುತ್ತಿತ್ತು

ನೀ ಒಮ್ಮೆ ಎದೆಗೊರಗೆ
ಬರಿಯೊಲವೆ ಸುರಿಯುತಲಿತ್ತು
ನಿನ್ನ ಮಡಿಲಲ್ಲಿ ತಲೆಯಿಡಲು
ಸ್ವರ್ಗದ ತೊಟ್ಟಿಲಲ್ಲಿ ತೇಲಿದಂತಿತ್ತು

ನನ್ನ ಬೊಗಸೆಯೊಳಗರಳಿದ್ದ ನಿನ್ನ ಮೊಗ
ಮರೆಸುತಿತ್ತು ಜಗ
ನೀನಿಲ್ಲದೆ ಬರಿದಾದ ಬೊಗಸೆಯ ನೋಡಿ
ತೊರೆಯಬೇಕೆನಿಸಿದೆ ಜಗವನೀಗ

ನಗುತಲಿರು ಹೂವೆ…

ಘಮಘಮಿಸಿ ನಾಚಿನಗುತ ಅರಳಿ ನಿಂತ
ಸುಮವೇ ನಿನಗೆ ಅತಿಥಿಗಳ ಬರವೇ
ಇಬ್ಬನಿಯನೊತ್ತು ನಳನಳಿಸಿ ಮಿಂಚಿರುವ
ಕುಸುಮ ಕನ್ಯೆಗೆ ಬಂಧುಗಳ ಕೊರಗೆ

ಬೇಡಿ ಬರುವುದು ಭ್ರಮರ ನಿನ್ನೊಡಲ ಮಧುವ
ನೀಡುತ್ತ ಸಿಹಿಮುತ್ತು
ಹೊಳೆವ ನೇಸರ ಕಾಣುವ
ತನ್ನ ಕೋಟಿ ಬಿಂಬವ ಇಬ್ಬನಿಯೆದುರು ನಿಂತು

ಮೊಗವರಳಿಸಿ ನಗುವ ತರಳೆ
ಮುಡಿದು ಕುಣಿವಳು ನಿನ್ನೊಡನೆ ನಲಿದು
ಮಿಗಿಲಾಗಿ ನೀ ನಗುತಿರು
ಇರುವುದೆಲ್ಲವ ಮರೆತು ದೇವಮುಡಿಗೊಲಿದು

ಬಾ ಗೆಳತಿ

ಕಣ್ಣೊಳಗೆ ಕಣ್ಣನಿಟ್ಟು ಬೆಳಕ ಚೆಲ್ಲಿಬಿಡು
ಮನದಾಳದ ಮೂಲೆಯಲ್ಲಿ ಮಸುಕಾಗಿರುವ
ಬಯಕೆಗಳೆಲ್ಲ ಪ್ರಜ್ವಲಿಸಲಿ

ಗಲ್ಲಕೆ ಗಲ್ಲವನೊತ್ತಿ ಮುದ್ದಿಸು ಬಾ ಗೆಳತಿ
ನಿಶ್ಚೇತವಾಗಿ ಸ್ತಬ್ಧವಾಗಿರುವ
ಆಸೆಗಳೆಲ್ಲ ಚಿಗುರೊಡೆಯಲಿ

ಎದೆಗೆ ಎದೆಯೊತ್ತಿ ಬಾಹುಗಳಲ್ಲಿ ಬಂಧಿಸಿಬಿಡು
ನಿನ್ನೆದೆಯ ಒಲವೆಲ್ಲ
ನನ್ನೆದೆಗೆ ಹರಿದು ಬರಲಿ

ಬಿಗಿದಪ್ಪಿ ಸಿಹಿಮುತ್ತಿನ ಮಳೆಗರೆದುಬಿಡು
ಹಸಿ ಕನಸುಗಳೆಲ್ಲ
ಬೆನ್ನಲ್ಲಿ ಬೆವರಾಗಿ ಇಳಿದು ಬಿಡಲಿ

ಆಷಾಡ

ತೂಗುತಿರುವ ಮುಂಗುರುಳ ನುಲಿದು ಹೆರಳ
ಸೇರಿಸುವಾಗ ಹೊಳೆವ ಬೆರಳ ಹರಳು
ಬೇಸರದುಸಿರ ಜೊತೆ ತನ್ನವನ
ನೆನೆದು ಗುನುಗುತಿರುವ ಕೊರಳು

ಷಾಡದೇಕಾಂತದಲಿ ಮನದ
ತುಂಬೆಲ್ಲ ಇನಿಯನ ನೆರಳು
ಕಾಣಲವನ ಕಾಯಬೇಕಿದೆ
ಕಡೆಯ ಎರಡು ಇರುಳು

ಈ ಮಾಸ ಸರಿದು ತೇಲಿ ಬರಬೇಕಿದೆ
ಶ್ರಾವಣದ ಹಗಲು
ಪ್ರಣಯದಾಟಕೆ ಎರಗಿದೆ
ಷಾಡದ ಮುಗಿಲು

ಗೆಳತಿ- ಪ್ರಕೃತಿ

ನಿತ್ಯವೂ ನೋಡಿದ್ದ ನಮ್ಮ
ವಾಯು ವಿಹಾರದ ಜೋಡಿ
ಕೇಳಿದವು ಗಿಡಮರವು
ಏಕಾಂಗಿ ನನ್ನತ್ತ ಮೊಗಮಾಡಿ

ಸೋಕಿದವು ತಂಗಾಳಿ ತೂಗಿದವು ತಂಬೆಲರು
ಕೇಳಿದವು ನನ್ನ ಎಲ್ಲೋ ನಿನ್ನ ಗೆಳತಿ?
ನನಗಿಂತ ಹೆಚ್ಚು ತಮಗೆ ಪರಿಚಿತ
ಅವಳು ಎಂಬಂತೆ ಪ್ರಕೃತಿ

ಜಿಗಿಯಲಿಲ್ಲ ಇಂದು ಅವಳು
ಹೆಮ್ಮರದ ಎಲೆ ಹಸಿರಿಗೆ
ತೂಗಲಿಲ್ಲ ಇಳಿ ಬಿದ್ದ
ಆಲದ ಹೊಸ ಬೀಳಿಗೆ

ಮೆಲ್ಲ ನುಡಿದೆ ನಾ:
ಅವಳಿಹಳು ಎನ್ನ ಕಣ ಕಣದಲ್ಲಿ
ಅವಳದೇ ಈ ಮನಸಿನೆಲ್ಲ ವಲಯ
ನಾ ಕೊಟ್ಟ ಉಡುಗೊರೆಯ ಹೊತ್ತಿಹಳು ಉಡಿಯಲ್ಲಿ
ಜೀವ ನೀಡಿ ಅದಕೆ ಬರುವಳು ಜೊತೆಯಲಿ

ನಾಚಿ ನಾ ನುಡಿದುದ ಕೇಳಿ
ಚಾಚಿ ನೀಡಿತು ಬಳ್ಳಿ
ತನ್ನೊಂದು ನಗುವ ಪುಷ್ಪ
ನೀಡೆಂದವಳಿಗೆ ಈ ಹೂವು ಬಲು ಅಪರೂಪ

ಪೊಗರಿನ ಚೆಲುವೆ

ಪೊಗರಿನೆದೆಯ ನಿಮಿರಿಸಿ
ನಡೆಯುತಿಹಳು ಚೆಲುವೆ ಸೊಕ್ಕಿ
ಗಂಡುಮನವ ಛೇಡಿಸಿದೆ
ಸೂಜಿನೋಟ ಕುಕ್ಕಿ ಕುಕ್ಕಿ

ಕಣ್ಣಂಚಲಿ ನೀಲಾಂಜನ
ತುಟಿಯಂಚಿನ ನಗೆ ಸಿಂಚನ
ನೋಡುತಿರೆ ಅವಳ ಬಿಂಕ
ಮಾತಿಗೆಲ್ಲ ಮಧುಭುಂಜನ

ಕಡುಗಪ್ಪಿನ ನೀಳಜಡೆ
ನುಲಿಯುತಿದೆ ನಡುವ ಸೋಕಿ
ವಯ್ಯಾರದ ನಾಟ್ಯನಡೆಗೆ
ಕುಣಿದಿದೆ ಎದೆ ತಾಳ ಹಾಕಿ

ಹುಸಿನಗುವಿನ ಕಿರುನೋಟ
ಬೀರುತಿಹಳು ಎಲ್ಲರೆಡೆಗೆ
ಎದೆಯ ತಾಪ ಏರುತಿದೆ
ಅವಳು ಇಡುವ ಅಡಿಗಡಿಗೆ

ಮಾತಾಗು ಮೌನವೇ…

ಕೊರೆವ ಮೌನವ ದೂಡಿ ಬಾ ಪದವೇ... ಮಾತಾಗಿ ಬಾ

ಭಾವದಬ್ಬರಕೆ ಮರೆಯಾದ ನುಡಿಯೆ
ಕಟ್ಟುಕಟ್ಟಳೆಗಳಲಿ ಕಟ್ಟಿಟ್ಟ ನುಡಿಯೆ
ದುಗುಡ ತುಂಬಿದ ನುಡಿಯೆ ಗುಡುಗುಡಿಸಿ ಬಾ
ಮಸುಕು ಕೋಣೆಯ ಗೋಡೆಯನೊಡೆದು ಬಾ

ಎದೆನೋವ ಬಸಿದ ಬಿಸಿಯುಸಿರ ಕಿಡಿನುಡಿಯೆ
ಹುಸಿಮೌನ ಸರಿಸಿ ನುಸುಳಿ ಬಾ
ಮನದ ಮೂಲೆಯ ಮಂಕಾದ ಪಿಸುಮಾತೆ
ಮಿಂಚಿಮಿನುಗಿ ಚತುರತೆಯಿಂದುಲಿದು ಬಾ

ಎದೆಯಾಳದಲಿ ಅದುಮಿಟ್ಟ ಪದವೇ
ಸಿಡಿದು ಅಬ್ಬರಿಸಿ ಬಾ
ತಮದ ಮೌನವ ಸೀಳಿ
ಮಾರ್ದನಿಸಿ ಮಾತಾಗಿ ಬಾ

ನಿಲ್ಲಿಸದಿರು ಮುರಳಿ ಗಾನವ…

ಚಂದ್ರನಿರದ ನೀಲಿ ಗಗನ
ನೀರಮೇಲೆ ದೋಣಿ ಯಾನ
ಮೊರೆಯುತಿದೆ ಕೊರೆವ ಮೌನ
ನಿಲ್ಲಿಸದಿರು ಮುರಳಿ ಗಾನವ…

ಇರುಳ ಹಾದಿ ಕಾಣದಿರಲು
ಮನವ ತುಂಬಿ ಭಯದ ಮುಗಿಲು
ಕಾಡುತಿದೆ ತೀರದಳಲು
ನಿಲ್ಲಿಸದಿರು ಮುರಳಿ ಗಾನವ…

ಕೊರಳು ಬಿರಿದು ಬಿಕ್ಕುತಿರಲು
ಕಣ್ಣ ನೀರು ಸುರಿಯುತಿರಲು
ಎದೆಯ ತುಂಬ ಏನೋ ದಿಗಿಲು
ನಿಲ್ಲಿಸದಿರು ಮುರಳಿ ಗಾನವ…

ದೂರದೆಲ್ಲೆ ತೀರದಲ್ಲಿ
ಕೊಳಲಗಾನ ಬರಲು ತೇಲಿ
ಮನವು ನಲಿವುದದನು ಕೇಳಿ
ನಿಲ್ಲಿಸದಿರು ಮುರಳಿ ಗಾನವ…

ಭಾವಕೊಂದು ಬಣ್ಣ

ಭಾವಕೊಂದು ಬಣ್ಣಬಳಿದು ನಗುತಲಿದೆ ಮನ
ಹಲವು ವರ್ಣ ಸೇರಿಬೆರೆತ ಬಣ್ಣದೋಕುಳಿ ಜೀವನ

ನಂಬಿಕೆಯೆ ಹಚ್ಚಹಸಿರು ನನ್ನ ನಿನ್ನ ಬಾಳಿಗೆ
ಧೃಡತೆ ಶಕ್ತಿ ಕೇಸರಿಯೆ ಇಹುದು ನಮ್ಮ ಪಾಲಿಗೆ
ನೀಲಾಗಸ ವೈಶಾಲ್ಯ ಕಂಗಳಲ್ಲಿ ತುಂಬಿದೆ
ಹಾಲ ಬಿಳುಪಿಗಿಂತ ಶುದ್ಧ ನಮ್ಮ ಪ್ರೀತಿ ಅರಳಿದೆ

ಹೇಗೋ ಏನೋ ಎಂಬ ಅಳುಕು ನಮ್ಮನಡುವೆ ಮೂಡದೆ
ಅನುಮಾನದ ಬೂದುಬಣ್ಣ ದೂರ ಸರಿದು ಓಡಿದೆ
ರಮಿಸಿ ಆಡುತಿರಲು ನಾವು ಕೆನ್ನೀಲಿಯ (ನೇರಳೆಯ) ರಂಗಿನಲಿ
ಕಡುನೀಲಿಯ ಕನಸ ದೃಶ್ಯ ನನಸಾಗಿದೆ ನಿಜದಲಿ

ಪ್ರೇಮದೊಡಲು ರಂಗೇರಿ ನಸುಗೆಂಪನು ಸೂಸಿದೆ
ಸಂತೋಷದ ತೆಳುಹಳದಿಯು ಚಿತ್ತಾರವ ಬಿಡಿಸಿದೆ
ಹಲವು ಬಣ್ಣ ಸಮ್ಮೇಳನ ಮಳೆಬಿಲ್ಲಿದು ಜೀವನ
ಎದೆಯಭಾವ ರಂಗುಪಡೆದ ಬಣ್ಣಗಳ ತೋರಣ