ನಾಟ್ಯದರಸಿ

ಚೆಲುವ ಕಣ್ಣ ಮಿಂಚಿ ಮಿನುಗಿಸಿ
ನಲಿವ ದೇಹ ಬಾಗಿ ಬಳುಕಿಸಿ
ಉಲಿವ ಕೊರಳ ಏರಿಸಿ ಇಳಿಸಿ
ನಲಿಯುತಿಹಳು ನಾಟ್ಯದರಸಿ

ಚಂದ್ರಮುದ್ರೆಯ ತೋರಿ ಹಸ್ತ
ಊರಿ ನೆಲದಿ ಕುಂಭ ಪಾದ
ತ್ರಿಭಂಗಿಯಲ್ಲಿ ನಿಂತು ನಡುವು
ತೋರಿ ವಿವಿಧ ಭಾವ ಭಂಗಿ

ಕುಣಿತಕ್ಹಾರಿದೆ ಕೊರಳ ಹಾರ
ನುಲಿದು ನಲಿದಿದೆ ನೀಳಜಡೆಯು
ಘಲಿರು ಎಂದು ಕಾಲ ಗೆಜ್ಜೆ
ಲಿಸುತಿರುವುದು ಅವಳ ಹೆಜ್ಜೆ

ಕಯ್ಯ ಬಳೆಯೆನೆ ಘಲ್ಲು ಘಲ್ಲು
ಗಗನಕ್ಹಾರಿದೆ ಅವಳ ಫಲ್ಲು
ರಾಗತಾಳಕೆ ಭಾವ ಸ್ಪುರಿಸಿ
ನೋಡಿರೆಮ್ಮ ನಲಿವ ನಾಟ್ಯದರಸಿ

ಬಾ ಬೆಳಕೇ

ಬಾ ನನ್ನೆದುರಿಂದು ನಲ್ಮೆಯ ಬೆಳಕೇ
ಅಂಧಕಾರವನೆಲ್ಲ ತೊಡೆಯ ಬಾ
ಅಂತಃಕರಣದೊಳಿಂದು ಮಿನುಗು ಬಾ
ಜ್ಞಾನ ಜ್ಯೋತಿಯನಿಂದು ಬೆಳಗು ಬಾ

ನಿನ್ನೊಲುಮೆಯ ಕಣ್ಬೆಳಕಲಿ
ಹೊಳೆಯಬೇಕಿದೆ ನಾನು
ನೀ ತೋರುವ ದಾರಿಯಲಿ
ನಡೆಸಬೇಕಿದೆ ನನ್ನ ನೀನು

ಕಾಲೂರಿ ಕಣ್ಣೊಳಗೆ ಮೆಲ್ಲನಿಳಿದು ಬಾ
ತಳವೂರಿ ಎದೆಯೊಳಗೆ ಹೊಳೆಯ ಬಾ
ದಯಮಾಡಿ ಮನದೊಳಗೆ ನೆಲೆಸು ಬಾ
ಅರಿವೆಂಬ ಸ್ಮೃತಿಯೊಳಗೆ ನಡೆಸು ಬಾ

ನಿನ್ನ ಕಾಂತಿಯಲಿಂದು
ಜಗವ ನೋಡುವ ಬಯಕೆ
ಬಾ ಒಳಗೆ  ಬೆಳಕೆ
ಜಗದ ಸೊಬಗೆನಗೆ ತೋರು ಬಾ

ಸ್ವಚ್ಛ ಹೃದಯ

ಶಿಲ್ಪ ಕಡೆದು ದಣಿವಾರಿಸುವ
ನಿದಿರೆಯೇ ಧ್ಯಾನ
ಕಳೆದ ದಿನಗಳ ನೆನೆಯುತ
ತಂಬಾಕು ಜಗಿಯುವುದೇ ಏಕಾಂತ

ಕಟ್ಟಿಗೆ ಕಡಿದು ಬಳಲಿ
ಬಿಟ್ಟುಸಿರೇ ನಿಟ್ಟುಸಿರು
ಅರಿಯದ ಕಂದನ ತಲೆಯ ಮೇಲೆ
ಕಯ್ಯಾಡಿಸುವ ವೃದ್ಧರದೇ ಪ್ರೀತಿ

ವಿಳಾಸ ತೋರೆ ಜೊತೆಗೂಡುವ
ಬಿಚ್ಚುಮನಸಿನದೇ ಸ್ನೇಹ
ಕಾಣದ ದಡಕೆ ಅಂಬಿಗನೊಡಗೂಡಿ
ದೋಣಿ ಏರುವುದೇ ನಂಬುಗೆ

ಬಾಳಿನೀ ಹಾದಿಯೊಳು ಎಲ್ಲ ತುಂಬಿವೆ
ನಿತ್ಯ ಪಯಣದಿ
ನೋಡಬೇಕಿದೆ ಅರಿತು ನಾವು
ತೆರೆದ ಸ್ವಚ್ಛ ಹೃದಯವ

ಹರೆಯದ ನೆರೆ

ಹರೆಯದ ನೆರೆ ಬಂದಿದೆ ಆಸೆಯ ಹೊರೆ ಹೆಚ್ಚಿದೆ
ಚಿಗುರು ಮೀಸೆ ಮೇಲೆ ಕಯ್ಯಿ ತೀಡಿ ತೀಡಿ ತಿರುವಿದೆ
ಜಗದ ಬಗೆಯ ಸುಖವನೆಲ್ಲ ತನ್ನದೆಂದೆ ತಿಳಿಯುತ
ಬೀಗಿ ಬೀಗಿ ನಡೆಯುತಿರುವ ಎಲ್ಲ ಗಮನ ಸೆಳೆಯುತ

ಕೆಂಪು ಅಂಗಿ ಹಸಿರು ಲುಂಗಿ ಕ್ಷಣ ಕ್ಷಣಕು ವಿವಿಧ ಭಂಗಿ
ಮೇಲೆ ಕೋಟು ತೊಟ್ಟು ಎಂದುಕೊಂಡ ತಾನೆ ಕೆಂಪು ಪರಂಗಿ
ಪೈಸೆ ಕೆಲಸ ಮಾಡಲೊಲ್ಲ ಗೆಳೆಯ-ಗುಂಪು ಬಿಡಲು ಒಲ್ಲ
ಅವ್ವ ಬೈದರಂತು ತಾನೆ ಏರಿಸಿರುವ ತನ್ನ ಸೊಲ್ಲ

ತರಹೇವಾರಿ ಮೆಟ್ಟು ಬೂಟು ಕೆದರಿಕೊಂಡು ತಲೆಯ ಜುಟ್ಟು
ಹಟವ ಬಿಡನು ಏನೇ ಆಗಲಿ ಹಿಡಿದದ್ದೇ ಪಟ್ಟು
ಹೊಸದು ಸಿನಿಮ ನೋಡಿ ಬಂದ ಇವನಿಗುಂಟು ಎಲ್ಲ ಶೋಕಿ
ಹರೆಯದ ನೆರೆ ಬಂದಿದೆ ಇವನ ಕೊಚ್ಚಿ ತೊಯ್ದಿದೆ

ಮುದ್ದು ರವಿ

ಮೂಡಣದೊಳು ರಂಗ ಚೆಲ್ಲಿ
ಹಡೆಯುತಿದೆ ಗಗನ ರವಿಯ
ಕೆಂಪು ದೇಹ ನುಣ್ಣನೆ
ನಾಚಬೇಕು ಚಂದ್ರನೆ

ಬೆಳೆದು ನಿಂತ ಪುಟ್ಟ ಪೋರ
ಆಡುತಿಹನು ಎರಚಿ ಬಾನಿಗೋಕುಳಿ
ಕರಗಿ ತಂಪು ಇಬ್ಬನಿ
ಬಾನ ತುಂಬಾ ರಂಗವಲ್ಲಿ

ಯುವಕನೀಗ ನಮ್ಮ ರವಿಯು
ಸೂಸುತಿಹನು ಪ್ರಖರ ಕಿರಣ
ನಗಲು ಜೀವ ಸಂಕುಲ
ಅವನೆ ತಾನೆ ಕಾರಣ

ಹೊಸತು ದಿನವ ತರಲು
ರವಿಯು ಹೊರಟಿಹನು ಹುರುಪಿನಿಂದ
ಎಂದಿನಂತೆ ಮರುದಿನ
ಮೂಡಿ ಬರುವ ಮುದ್ದು ಕಂದ

ಬೆಳ್ಳಿ ಬೆಳಗು

ಊರುಗೋಲನೂರಿ ಮುದುಕ
ತೆವಳಿ ತೆವಳಿ ನಡೆವ ತೆರದಿ
ಇಳಿಯುತಿದೆ ಸೂರ್ಯ ಕಿರಣ
ಮಂಜು ಹನಿಯ ಭೇದಿಸಿ

ದಟ್ಟ ಮಂಜಲಿ ತೂರಿ ತಾನು
ಭೂಮಿಗಿಳಿದಿದೆ ಬೆಳ್ಳಿ ಬೆಳಗು
ಬೆಳಕ ನೀರಲಿ ಜಗವ ತೊಳೆದು
ಸೆರಗ ಹಾಸಿದೆ ಹಾಲ ಬೆಳಕು
                                              
ರಂಗು ರಂಗಿನ ರಂಗವಲ್ಲಿ
ತೋರಿ ನಲಿದಿದೆ ಜಗವು ತಾನು
ಚಂದದಿಂದಲಿ ನಗುತ ಭೂಮಿ
ನೋಡುತಿಹಳು ತೆರೆದ ಬಾನು

ಹಾರುತಿರುವ ಪಕ್ಷಿ ಸಂಕುಲ
ಹಾಡಿ ಸಾಗಿವೆ ಸೊಗಸ ಮೂಡಿಸಿ
ನೋಡುತಿರುವ ಕಣ್ಣುಗಳಿಗೆ
ವರ್ಣ ಚಿತ್ರದ ಐಸಿರಿ

ಏಳಿರೆಳಿರಿ ಎಲ್ಲ ಮನುಕುಲ
ನಸುಕು ನಿದ್ರೆಯ ಛೇಧಿಸಿ
ಭುವಿಗೆ ಮುಸುಕು ಹೊದ್ದು
ಮಲಗಿದ ಕೊರೆವ ಚಳಿಯ ಓಡಿಸಿ

ನೂರು ನಮನ

ಬೆಂದ ಕಾವ್ಯದ ಸಾಲೊಳಿತ್ತು
ನೊಂದ ನನ್ನ ಕವನ
ಹೆಕ್ಕಿ ತೆಗೆದು ರಾಗ ನೀಡಿದ
ನಿನಗೆ ನನ್ನ ನೂರು ನಮನ

ಎಂದೊ ಬರೆದ ಸಾಲು ಅದುವೇ
ಮರೆತೇ ಬಿಟ್ಟಿತ್ತು  ಮನ
ಸಪ್ತ ಸ್ವರದಲಿ ಬೆರೆತು ಇಂದು
ಮರಳಿ ತಂದಿತು ಸಾಂತ್ವನ

ಜೀವ ಇಲ್ಲದ ಶವದ ತೆರದಿ
ಕಮರಿತ್ತೆನ್ನ ಮೈಮನ
ಹುರುಪಿನಿಂದ ನಲಿದೆ ಕೇಳಿ
ಜೀವ ತುಂಬಿದ ಗಾಯನ

ಯಾವ ದೇವಗೆ ಮುಗಿಯಲಿಂದು
ಮರಳಿ ಬಂದಿದೆ ಹೊಸ ಜೀವನ
ಮುಗಿದ ಬದುಕಿಗೆ ತಿರುವ ತಂದ
ನಿನ್ನ ಗೀತೆಯೆ ಪಾವನ

ಆಶಾ-ಪತಂಗ

ಅಂತರಂಗದ ಬೇಲಿ ಮೇಲೆ
ಹಾರುತಿದೆ ಆಶಾ ಪತಂಗ
ಅಂತರಾಳದ ಸುಮದ ಸಂಗಡ
ಬಯಸಿ ತಾನು ಸ್ನೇಹಸಂಗ

ಅರಳಿ ನಿಂತ ಚೆಲುವ ಕಂಡು
ಪುಷ್ಪ ಪಾತ್ರೆಯ ಮಧುವ ನೆನೆದು
ಮನದೊಳೆನಿತೋ ಕನಸ ಹೆಣೆದು
ಬಳಿಗೆ ಬರುತಿದೆ ಸುತ್ತಿ ಸುಳಿದು

ಸೋಲಬೇಡ ಕೇಳು ಮನವೇ
ಆಸೆಯೆಂಬುದು ಅಗ್ನಿಯದುವೆ
ಪತಂಗದಾಸೆಯ ತೊರೆದು ನೀನು
ಛಲದೊಳಿದ್ದರೆ ಗೆದ್ದೆ ಗೆಲುವೆ