ನೇಸರನುದಯ

ನೋಡದೋ ದೂರ ದಿಗಂತದಂಚಿನಲಿ
ನೇಸರನುದಯಿಸುತಿಹ
ಬಂಗಾರದುಂಗುರಕೆ ರಾಗರಶ್ಮಿಯ
ಹೊಳಪ ಮೈದುಂಬಿ ಮೆರೆದು

ಸಹಸ್ರ ರತ್ನರಾಗ ರಶ್ಮಿ
ಹೊಮ್ಮಿ ಚಿಮ್ಮಿ ಹರುಷದಿ
ಮೂಡುತಿರುವ ಭಾಸ್ಕರನು
ತಾಮಸ ತಾನಳಿಸೆ ಜಗದಿ

ತಿರೆಯನಾಳ್ವ ತಿಮಿರ ತೊಡೆಯೆ
ಹೊನ್ನ ತೇಜ ನಗುತಿಹ
ತಮದ ಗಾಢ ಹೊನಲನಳಿಸೆ
ತವಕದಲ್ಲಿ ಬರುತಿಹ

ಬೊಕ್ಕತಲೆ

ಬೊಕ್ಕತಲೆಯ ಬೋಳುಮಂಡೆ
ಚೊಕ್ಕವಾಗಿ ಹೊಳೆದಿದೆ
ಮಳೆಯು ಬಂದು ಸಾಪುಗೊಂಡ
ಬಂಡೆಯಂಥ ನುಣುಪಿದೆ

ಕರಿಯ ಬಿಳಿಯ ಎಳೆಯ ಹಳೆಯ
ಒಂದು ಕೂದಲಿಲ್ಲದೆ
ಬಸಿಲಿನಲ್ಲಿ ಪ್ರತಿಫಲಿಸುವ
ಗುಮ್ಮಟವ ಹೋಲುತಿದೆ

ಕೇಶವಿರದ ಮಂಡೆಯೇನು
ತನ್ನೊಡೆಯನ ಹಳಿವುದೇ...?
ಯಾರೆ ಬರಲಿ ಎಂದಿನಂತೆ
ಹೊಳೆವ ನಗುವ ಚೆಲ್ಲಿದೆ

ಬೆಳಕಿದೇಕೆ ಬಾಡಿದೆ

ಬೆಳಕಿದೇಕೆ ಬಾಡಿದೆ...?
ಹೊಸಕಿರಣವ ಸೂಸದೆ

ಮಬ್ಬು ಮಸುಕು ಬಯಲಿನಲ್ಲಿ
ಹೊಸಹುರುಪನು ತಾರದೆ
ಕಪ್ಪಡರಿದ ಜಗದ ಒಡಲ
ಕಾರ್ಗತ್ತಲ ಸೀಳದೆ

ಶಕ್ತಿಯೆಲ್ಲ ಉಡುಗಿದಂತೆ
ಸೋತು ಸೊರಗಿ ಬಿದ್ದಿದೆ
ಕೊಡವಿ ಎದ್ದು ಹೊಳೆಯದೇನೆ
ಮಂಕು ಕವಿದು ಕುಳಿತಿದೆ

ಕರಿನೆರಳಲಿ ಮರೆಯಾದ
ಸತ್ವ ತೆರೆದು ತೋರದೆ
ಕೋರೈಸುವ ಕಾಂತಿ ಬೀರಿ
ನಗುತ ಮಿಂಚಿ ಮಿನುಗದೆ

ಭರವಸೆಯ ಹಕ್ಕಿ

ಮುರಿದು ಬಿದ್ದ ಗೂಡ ತೊರೆದು
ಹಕ್ಕಿಯೊಂದು ಹಾರಿದೆ
ತೆರೆದ ಬಾನ ದಿಟ್ಟಿಸುತ್ತ
ನೂರು ಕನಸ ಕಂಡಿದೆ

ಹೊಸಬಾಳಿನ ಹೊಂಗನಸು
ಮನದಾಳದಿ ಮೂಡಿದೆ
ಭರವಸೆಯ ಹೊಸ ಮುಗಿಲು
ಬಾಂದಳದಿ ತೇಲಿದೆ

ನವಜೀವನ ಕಟ್ಟಿಕೊಳಲು
ಹಕ್ಕಿ ತಾನು ಹೊರಟಿದೆ
ನೋವು ದುಃಖ ದುಗುಡಗಳ
ತೂರಿ ಮೇಲೆ ಹಾರಿದೆ

ಬತ್ತಿದೆ ಕೆರೆ

ಎಂಥಾ ಸಿರಿ ಇತ್ತು ನೀರಿನ ಸೆಲೆ ಇತ್ತು
ಹಸಿರಿನ ಚೆಲುವರಳಿ ಊರೆಲ್ಲ ನಗುತಿತ್ತು

ಸಿಹಿನೀರ ಕೆರೆಯೊಂದು ಊರ ಮಗ್ಗುಲಲಿತ್ತು
ಹೋಗಿಬರುವವರಿಗೆ ತಂಪನೆರೆಯುತಿತ್ತು
ಬಾಯಾರಿ ಬಳಲಿದ ಜನಜಾನುವಾರಿಗೆ
ತನ್ನೊಡಲ ಸೀನೀರ ಕರೆದು ಕುಡಿಸುತಿತ್ತು

ಈಗೆಲ್ಲೋ ಕಾಣದು ಕೆರೆ ಎಂದೋ ಬತ್ತಿಹುದು
ಬಳಲಿ ಬಂದವರೆಲ್ಲ ಬಾಯಾರಿ ನಿಂದವರೆ
ಸಿಹಿನೀರ ಕೆರೆಯ ಮನದೊಳಗೆ ನೆನೆದವರೆ
ನೀರಿಲ್ಲದ ಊರಲ್ಲಿ ಕಣ್ಣೀರ ಕರೆದವರೆ

ಅವ್ವ ನೆನಪಾದಳು

ನಡುಮನೆಯ ಒಳಕಲ್ಲು ಗುಡುಗುಡಿಸಿ
ಅರೆವ ಖಾರ ಘಮಗುಡಲು
ಅವ್ವ ನೆನಪಾದಳು

ತುಂಬಿದ ಬಿಂದಿಗೆಯ ನೆತ್ತಿಯ ಮೇಲೊತ್ತು
ತುಂಬುಗಂಭೀರದಲಿ ಹೆಣ್ಣೊಂದು ಬರುವಾಗ
ಅವ್ವ ನೆನಪಾದಳು

ತೂಗು ನೆಲುವಿನ ಮೇಲೆ ಬೆಲ್ಲ ಬೆರೆಸಿದ ಹಾಲು
ಕಿರುಮನೆಯ ಒಳಗೆಲ್ಲ ನರುಗಂಪು ಬೀರಿರಲು
ಅವ್ವ ನೆನಪಾದಳು

ಮಜ್ಜಿಗೆಯ ಕಡೆಗೋಲು ಹೊಸಮಡಕೆಯ ಮೊಸರಲ್ಲಿ
ಬೆಳ್ನೊರೆಯ ಚಿಮ್ಮಿಸುತ ಹಸಿಬೆಣ್ಣೆ ತೆಗೆದಿರಲು
ಅವ್ವ ನೆನಪಾದಳು

ನೆತ್ತಿಗೊತ್ತಿದ ಬೆಚ್ಚಗಿನ ಹರಳೆಣ್ಣೆ ಜಿನುಜಿನುಗಿ
ಹನಿಯಾಗಿ ನೊಸಲ ಮೇಲಿಳಿದಿರಲು
ಅವ್ವ ನೆನಪಾದಳು

ಮುಂಬಾಗಿಲ ಹೊಸಿಲಲ್ಲಿ ಹಸನಾದ ರಂಗೋಲಿ
ಅಂಗಳದ ತುಂಬೆಲ್ಲ ನಸುನಗುತ ಅರಳಿರಲು
ಅವ್ವ ನೆನಪಾದಳು

ಮುಸ್ಸಂಜೆಯ ಮಸುಕಲ್ಲಿ ಅಚ್ಚೆಳ್ಳೆಣ್ಣೆಯ ಸೊಳ್ಳು
ನಭದೆಡೆಗೆ ಮೊಗಮಾಡಿ ತಲೆಯಿತ್ತಿ ಉರಿವಾಗ
ಆದಿಶಕ್ತಿ… ಅನಂತಶಕ್ತಿ… ಅಗಾಧಶಕ್ತಿ…
ಅವ್ವ ನೆನಪಾದಳು… ನನ್ನವ್ವ ನೆನಪಾದಳು

ದಣಿದ ವೀಣೆ

ಏಕೆ ದಣಿದಿದೆ ವೀಣೆ ದನಿ
ಇದೇಕೆ ಜಾರಿದೆ ಕಣ್ಣ ಹನಿ

ಯಾವ ನೆನಪು ಕಾಡುತಿದೆ
ಏಕೆ ಕಣ್ಣು ತೋಯುತಿದೆ
ಯಾವ ಮಾತು ಹೊರಡದೆ
ತುಟಿಯಂಚಲೆ ತಡೆದಿದೆ

ಶೋಕರಾಗ ಮಿಡಿದು ಹೃದಯ
ತನಗೆ ತಾನೇ ಬೇಯುತಿದೆ
ಮೂಕವೇದನೆ ತುಂಬಿಬಂದು
ಎದೆಯ ಭಾವ ನರಳುತಿದೆ

ಇಂಪಾದ ದನಿಯೊಡೆದು
ಏಕೆ ಕಂಠ ಬಿರಿದಿದೆ
ಬಿಸಿಮೌನದ ತಾಪಕೆ
ಉಸಿರು ಭಾರವಾಗಿದೆ

ಕೇಳುತಿರಲಿ ನಿನ್ನ ದನಿಯು…

ಮಬ್ಬು ಬೆಳಗು ಹರಿಯುವಾಗ
ಇಬ್ಬನಿಹನಿ ಕರಗುವಾಗ
ಹಕ್ಕಿಗಾನ ಉಲಿಯುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಸಂಜೆ ಕಡಲು ಮೊರೆಯುತಿರಲು
ಅಲೆಯು ಬಳುಕಿ ಆಡುತಿರಲು
ಮೈಯ ಮರೆತು ನೋಡುತಿರಲು
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಇರುಳು ಚಂದ್ರ ಹೊಳೆಯುವಾಗ
ತಾರೆ ಮಿಂಚಿ ಮಿನುಗುವಾಗ
ಮೆಲ್ಲ ಗಾಳಿ ಬೀಸುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಮಡಿಲಿನಲ್ಲಿ ತಲೆಯನಿಟ್ಟು
ಕನಸಿನಲ್ಲಿ ತೇಲುವಾಗ
ಯಕ್ಷಲೋಕ ಗಾನದಂತೆ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಒಂಟಿ ಯಾನ ಮಾಡುವಾಗ
ತುಂಟ ನೆನಪು ಮೂಡಿ ಬಂದು
ಮುಗುಳು ನಗೆಯು ಮೂಡುವಾಗ
ಕೇಳುತಿರಲಿ ನಿನ್ನ ದನಿಯು ನನ್ನ ಕಿವಿಯಲಿ…

ಮೂಡಲ ಸೀಮೆಗೆ ಮಳೆಯಾಯ್ತು

ಮೂಡಲ ಸೀಮೆಗೆ ಮಳೆಯಾಯ್ತು ನೋಡು ಬಾರೊ ಅಣ್ಣಾ
ಬೆಟ್ಟಗುಡ್ಡಗಳು ನಕ್ಕುನಗುತಾವೆ ಹೊತ್ತು ಹಸಿರು ಬಣ್ಣ

ಸೂರುಸೂರಿನ ಅಂಚಲ್ಲಿ ಮುತ್ತಿನಹನಿಗಳು ತೂಗಾಡಿ
ಬೊರೆಮೇಲಿನ ಹೊಸನೀರು ಹಳ್ಳಕೊಳ್ಳದಲಿ ಬಳುಕಾಡಿ
ಊರಮುಂದಿನ ಓಣಿಯಲಿ ತುಂಬಿಹರಿದಾವು ಕೆರೆಕೋಡಿ

ಮೂಡಲ ಸೀಮೆಯ ಬಯಲೆಲ್ಲ ಮಳೆಬಂದು ತಣಿಲಾಯ್ತು
ಮರಮರವೆಲ್ಲ ಚಿಗುರೊಡೆದು ನೆಲಕೆಲ್ಲಾ ನೆಳಲಾಯ್ತು
ಹಚ್ಚಹಸಿರಿನ ಮರದಲ್ಲಿ ಕೋಗಿಲೆಕಂಠ ಕೊಳಲಾಯ್ತು

ದೇವ ದೇವಿಯರ ಗುಡಿಯಲ್ಲಿ ಗಂಟೆ ಜಾಗಟೆ ಮೊಳಗಿದವೋ
ತೇರಬೀದಿಯ ತುಂಬೆಲ್ಲ ತರತರ ಹೂಗಳು ಘಮ್ಮೆಂದೋ
ಹಟ್ಟಿಹಟ್ಟಿಯ ಹೊಸಿಲಲ್ಲಿ ಸಾಲು ದೀಪಗಳು ಬೆಳಗಿದವೋ

ಮಾಗಿಯ ಚಳಿ

ಈ ಮಾಗಿಯ ಚಳಿಯೆ ಹೀಗೆ:
ಅವಳ ಮುಡಿಜಾರಿದ ಮಲ್ಲಿಗೆಯ ಘಮಲನ್ನು
ತೀಡಿ ತಂದ ಮಾಗಿಯ ಕುಳಿರ್ಗಾಳಿ
ಕಚಗುಳಿಯಿಟ್ಟು ಬೆಳ್ಳಂಬೆಳಗ್ಗೆ ಮತ್ತೇರಿಸುತಿದೆ

ಅವಳ ಕಡೆಗಂಬದ ಸೊಂಟ ಬಳಸಿದ
ನನ್ನ ಕೈ ಬಿಡಲೊಲ್ಲದು
ನನ್ನ ತೋಳತೆಕ್ಕೆಯಲ್ಲಿ ಮುದುಡಿದ ಅವಳ ಮುಖ
ಸೂರ್ಯ ನೆತ್ತಿಗೆ ಬಂದರೂ ಅರಳಲೊಲ್ಲದು

ಕುಳಿರ್ಗಾಳಿ ಬೀಸಿದಂತೆಲ್ಲಾ ಬಿಗಿದಪ್ಪುವ ಅವಳು
ಎದೆಗೂಡಿನಲಿ ಬಚ್ಚಿಟ್ಟು ಬಿಸಿಯೀವ ನಾನು
ಈ ಮಾಗಿಯ ಚಳಿಗೆ ನಿಗಿಕೆಂಡವೂ ಬಿಸಿತಾರದು
ಮಾಗಿ ಬರಲು ಮೈ ಮುದುಡಿದೆ ಮನ ಅರಳಿದೆ