ಕಾರ್ಮಿಕರು

ಕಾರ್ಮಿಕರಿವರು ಕಾರ್ಮಿಕರು
ದೇಶದೇಳಿಗೆಗೆ ಶ್ರಮಿಸುವ ಶ್ರಮಿಕರು
ಮೈಯ್ಯನು ಮುರಿದು ನಗುತಲಿ ದುಡಿದು
ಪ್ರಗತಿಯ ತರುವ ನಾವಿಕರು

ಸುಳ್ಳನಾಡದೆ ಕದ್ದು ಓಡದೆ
ಬೆವರನು ಹರಿಸಿ ದುಡಿವವರು
ಕೇಡನು ಬಯಸದೆ ದ್ರೋಹವ ಬಗೆಯದೆ
ನಂಬಿಕೆ ಗಳಿಸಿ ಗೆಲುವುದ ಬಲ್ಲರು

ದುಡಿಮೆ ಎನ್ನುವ ದೇವರ ದೀಪಕೆ
ಪರಿಶ್ರಮ ತೈಲವನೆರೆಯುವರು
ಕ್ರಾಂತಿಯ ಬೆಳಕನು ನಾಡಿಗೆ ತರುವ
ಕಾಯಕ ಮಾರ್ಗದ ಯೋಗಿಗಳು

ಛಲಗಾತಿ

ಅವ್ವ ಮುದ್ದೆ ಮಾಡುವ ಪರಿಯ ನೋಡಬೇಕು
ಹಿಡಿದ ಕೆಲಸವ ಬಿಡದೆ ದುಡಿವ ಅವಳ ಛಲವ ನೋಡಬೇಕು
ಮಡಕೆಯ ಬಾಯಿಗೆ ಕವಗೋಲು ಸಿಕ್ಕಿಸಿ
ಕೋಲಿನಲ್ಲಿ ಹಿಟ್ಟು ತಿರುವಿ ಕಟ್ಟಿದ ಗಂಟುಗಳ ಪುಡಿಮಾಡುವುದ

ಅಂದು ನಾನು ಕನಸ ಕಂಡಿದ್ದೆ: 
ಅವ್ವನಂತೆ ನಾನೂ
ಈ ಜಗಕ್ಕಂಟಿದ ಜಾಡ್ಯದ ಗಂಟುಗಳನ್ನೆಲ್ಲ ತೊಡೆದು ಬಿಡುವೆನೆಂದು
ಅವ್ವ ಛಲಗಾತಿ ಹಿಡಿದ ಕೈಂಕರ್ಯವ ಬಿಡದೆ ಕೊನೆವರೆಗೂ ನಡೆಸಿದಳು
ಇಂದು ಮಾಡಿದ ಮುದ್ದೆಯೂ
ಅದೇ ಹದ… ಅದೇ ನುಣುಪು… ಅದೇ ಗಾತ್ರ… ಒಂದೂ ಗಂಟಿಲ್ಲ

ನಾಚಿಕೆಯಾಗುತ್ತಿದೆ ನನಗೆ...
ಬದುಕುವಾಸೆಗೆ ನಾನೂ ಜಗದ ಜಾಡ್ಯದ ಗಂಟಾಗಿಬಿಟ್ಟೆನೆಂದು
ಭಯವಾಗುತ್ತದೆ ಆ ಛಲಗಾತಿ ಹಿಟ್ಟಿನ ದೊಣ್ಣೆಯೊಡನೆ ಬಂದು
ನನ್ನನ್ನು ಹೊಸಕಿಬಿಡುವಳೋ ಎಂದು

ಬದುಕಿನ ಬಣ್ಣ

ಎಂತೆಂತಹ ಬಣ್ಣಗಳು ನಮ್ಮ ಬದುಕ ಚಿತ್ರದಲಿ
ಮಾಸದಂತೆ ಉಳಿದಿವೆ ನನ್ನ ಮನದ ಭಿತ್ತಿಯಲಿ

ಬರಿಯ ಬಿಳಿಯಪರದೆ ನನ್ನ ಬಾಳು ನೀನಿರದೇ ಅಂದು
ಏಳೇಳು ವರ್ಣಗಳು ಮೇಳೈಸಿವೆ ಇಂದು
ನೀ ಬಂದ ದಿನದಂದು ಬದುಕೆಲ್ಲ ಹಸಿರು
ಕಡುನೀಲಿ ಕನಸಿನಲು ನಿನ್ನದೇ ಹೆಸರು 

ಮೋಹಕ ತಿಳಿನೀಲಿಯ ನಗೆಯ ನೀನು ಸೂಸಿರಲು
ಕೆನ್ನೀಲಿಯ ಅಮಲಿನಲಿ ನಿನ್ನ ನಾನು ಸೇರಿರಲು
ಜಗವೆಲ್ಲ ಕೆಂಪೇರಿ ನಮ್ಮ ನೋಡಿ ನಗುತಲಿತ್ತು
ಮುಚ್ಚಿದ ಕಡುಗಪ್ಪನು ಒಲವ ಬೆಳಕು ಓಡಿಸಿತ್ತು

ಸಂತಸದ ತೆಳುಹಳದಿ ಮನದ ತುಂಬ ಮಿನುಗಿತ್ತು
ನಿನ್ನ ನನ್ನ ಧೃಡ ಶಕ್ತಿ ಕೇಸರಿಯನು ತೋರಿತ್ತು
ಎನಿತು ರಂಗು ಪಡೆದ ಬದುಕು ನಮ್ಮ ಈ ಜೀವನವು
ಭಾವದೊಡಲ ನಮ್ಮ ಮನಕೆ ಬಣ್ಣಗಳ ಬಂಧನವು

ದೃಷ್ಟಿ

ಅಡುಗೆಮನೆಯ ಕಪ್ಪು ಕತ್ತಲಲ್ಲಿ
ನನ್ನವ್ವ ನನಗೆ ದೃಷ್ಟಿ ತೆಗೆದಿದ್ದಳು
ಜಗದ ತಾಯ್ತನವೆಲ್ಲ ಸೇರಿ
ಇಡೀ ಸೃಷ್ಟಿಗೇ ದೃಷ್ಟಿ ತೆಗೆದಂತೆ

ಉರಿಯೊಲೆಯ ಮೇಲಿದ್ದ ಪಾತ್ರೆಯ ತಳದ
ಕರಿಮಸಿಯ ಬೊಟ್ಟಿಟ್ಟು ಹಣೆಗೆ...ಗಲ್ಲಕೆ...
ಅದು ಸಾಲದು, ಅವಳ ಕಂದನ ಚಂದಕ್ಕೆ…!
ಬಳಿಯಿದ್ದ ಕಸಬರಿಕೆಯ ಕಡ್ಡಿಗಳಿರಿದು
ಉರಿಬೆಂಕಿಗೆ ಸೋಕಿಸಿ ನೀವಾಳಿಸಿ
ಸಿಡಿದ ಕಡ್ಡಿಯ ಸದ್ದಿನ ಜೊತೆ ತಾನೂ ಬಡಬಡಿಸುತ್ತಿದ್ದಳು
ಸದ್ದಿಗೊಂದರಂತೆ ಬೈಗುಳ ಹಾಕಿ
ಕಣ್ಣು ತಗುಲಿಸಿದವರ ಶಪಿಸುತ್ತ

ಕತ್ತಲ ಮನೆಯ ಮೂಲೆ ಮುಡುಕುಗಳಿಗೆ ಕಣ್ಣಾಯಿಸದೆ
ಖಾತ್ರಿಯಿಂದ ಸಾಮಾನು ಡಬ್ಬಗಳನ್ನು ತೆಗೆಯುವ ಅವಳೆಷ್ಟು ಜಾಣೆ
ಕೈತಪ್ಪಿ ಬದಲಿ ಡಬ್ಬ ತೆಗದದ್ದು ಒಂದುದಿನವೂ ಕಾಣೆ..!
ಹಾಗೆ ತೆಗೆದ ಖಾರದ ಮಯ್ಯ ಕೆಂಪು ಮೆಣಸಿನಕಾಯಿ
ನೆನ್ನೆಯಷ್ಟೇ ಕೆಂಡವಾಗಿದ್ದ ಕಾಲ ಕೆಳಗಿನ ಕರಿಯ ಇದ್ದಿಲನ್ನು
ಮುಷ್ಟಿಯೊಳು ಹಿಡಿದು ನನ್ನಿಂದ ಥೂ... ಎನಿಸುತ್ತಿದ್ದಳು
ಸೆರಗಂಚಿನ ತುದಿಯು ನೆತ್ತಿಯಿಂದ ಪಾದವನ್ನು ಮುಟ್ಟಿಸುತ್ತಿತ್ತು
ನನ್ನ ತುಂಬುಗೆನ್ನೆಯ ಸವರಿದ ಅವಳ ಬೆರಳುಗಳು ನೊಟಕೆ ಮುರಿಯುತ್ತಿದ್ದವು

ತನ್ನ ಜೀವಮಾನವೆಲ್ಲ ಸವೆಸಿದ
ಕಗ್ಗತ್ತಲ ಅವಳ ಅಡುಗೆ ಮನೆಯ ಪ್ರಪಂಚದಲ್ಲಿ
ನಾನು ಕಣ್ಣಗಲಿಸಿ ನೋಡಿದಾಗ ಕಂಡದ್ದು:
ಕಿಟ್ಟ ಕಟ್ಟಿದ ಗೋಡೆಗಳು, ಅರ್ಧ ಉರಿದ ಸೌದೆ,
ಕಂಟು ವಾಸನೆ ಬೀರುವ ನೆಲಕ್ಕೆ ಚೆಲ್ಲಿದ ಬಸಿದ ಗಂಜಿ
ಸುತ್ತಿಕೊಂಡ ಹೊಗೆ, ಪೇರಿಸಿಟ್ಟ ಕಪ್ಪಾದ ಮಡಕೆಗಳು
ಮತ್ತು ನೀರೊಸರಿ ಕೆಂಪಾದ ಅವ್ವನ ಕಣ್ಣು
ಅವಳು ಕಂಡದ್ದು ಮಾತ್ರ ಬರೀ ನನ್ನ ಕಣ್ಣ ಬೆಳಕು…

ಕೂಡಿ ನಡೆವ ತವಕ

ನೀನಿಂದು ಕೇಳು… ಒಳಮನದ ಹಾಡು…
ಬಾ ಬಂದು ಸೇರು… ನನ್ನೆದೆಯ ಗೂಡು…
ನಾಕಂಡ ಕನಸು… ನೀನಿರಲು ನನಸು
ನೀನಾದೆ ಇನಿಯ… ಈ ಮನದ ಸೊಗಸು
ಕನಸು ಮನಸನೆಲ್ಲ ಆವರಿಸಿ… ಮತ್ತೆ ಮೂಡುತಿಹೆ ನೀನೆ ಅವತರಿಸಿ…

ಜೀವನದ ಹಾದಿಯಲಿ, ನಿನ್ನ ಕೂಡಿ ನಡೆವ ಒಂದೇ ತವಕ...
ಸಾಗುತಿಹ ದಾರಿಯಿದು, ಬೇರಾಗದಿರಲಿ ಕೊನೆಯ ತನಕ…
ಜೋಡಿಜೀವದ ಒಂದೆ ಗುರಿಯ, ಸೇರಿ ತಲುಪುವ ಬಾರೊ ಗೆಳೆಯ…
ಮನಸಿನೊಳು ಮೂಡುತಿರುವ, ಕಣ್ಣೆದುರು ಕಾಣದಿರುವ…
ಕನಸಿನ ಚಿತ್ರಕೇ… ಕುಂಚ ಹಿಡಿದು… ಬಣ್ಣ ಬಳಿಯಲು... ಬೇಗ ಬಂದು ಸೇರೋ...

ಈ ಹಾದಿಯೆ ಹೀಗೇ, ನೆಲಬಿರಿದಾ ಹಾಗೇ.. ಹೇ…
ಬಿರುಬಿಸಿಲಿನ ರವಕೆ, ಅಡಿಯಿಡದ ಹಾಗಿದೆ...
ಬರಿಮುಳ್ಳಿನ ಮೊನೆಯೇ... ಜೀವನ ಪಥದೇ...
ಪಯಣದ ತುದಿಯನು ಅರಿಯದೇ ತವಕಿಸಿ...
ಬದುಕಿದು ಬಯಲಲಿ ದಿಕ್ಕೆಟ್ಟು ನಿಂತಿದೇ...

ನಿನ್ನ ನೆನೆದರೆ ನನ್ನೊಳಗೇ, ಒದಗಬಲ್ಲದೇ ಸಾಂಗತ್ಯ?
ನಿನ್ನ ಬರವಿಗೆ ಕಾದಿರುವೆ, ಬಂದು ನೀಡುವೆಯ ಸಾಮೀಪ್ಯ?
ಕೊನೆ-ಮೊದಲಿಲ್ಲದ ದಾರಿಯಿದು, ನೂರು ಮೀರಿದಾ ಕವಲುಗಳು
ಗುರಿಯನು ತಲುಪುವ ಓಟವಿದು, ವೃತ್ತಪಥಗಳ ತಿರುವುಗಳು

ಶೃತಿಯಿರದ ಗಾನದಲಿ... ಹಿತವಿಲ್ಲ ನೋಡು ನಿನ್ನಾ ಮರೆತು
ಹಾಡುವ ಬಾ ನಲಿಯುತಲಿ... ಸ್ವರಾತಾಳದೊಡನೆ ನಾವೂ ಕಲೆತು
ಮೂಕಹಕ್ಕಿಯು ನೇಯುತಿರುವ, ಬಾಯಿತೆರೆದು ಹಾಡದಿರುವ
ಸಹಜತೆಗೂ ಮೀರಿರುವ, ಕಲ್ಪನೆಗೂ ನಿಲುಕದಿಹ
ಒಲವಿನ ಗೀತೆಗೇ... ಭಾವ ಮಿಡಿದು ರಾಗ ಬೆಸೆದು ಹಾಡು ಬಾರೋ ಬೇಗಾ...

ಕಲಾಂ ನಮನ

ಭಾರತಮಾತೆಯ ಕೀರ್ತಿ ಕಳಸ
ನಾಡು ನಮಿಸಿದ ಪಾವನಾತ್ಮ
ಜನಾಭಿಮಾನದ ಕೇಂದ್ರ ಬಿಂದು
ಎಲ್ಲರ ಗೆಲ್ದ ಅಜಾತಶತ್ರು

ನೂರು ಸಂತರ ಮೀರ್ದ ನಗುವು
ಜಗದ ಏಳ್ಗೆಯ ಜ್ಞಾತ ನಿಲುವು
ಮಾನವತ್ವವ ತೋರ್ದ ಗುರುವು
ಜ್ಞಾನ ಪಡೆದ ಶ್ರೇಷ್ಟ ಗೆಲುವು

ಮೇರು ಶಿಖರವನೇರ್ದ ತಾಳ್ಮೆ
ಮನುಜ ಪಥಕೆ ತುಡಿದ ಒಲುಮೆ
ಕೇಡ ಬಗೆಯದ ದಿವ್ಯ ದೃಷ್ಟಿ
ದೇಶ ಪಡೆದ ಪುಣ್ಯ ಸೃಷ್ಟಿ

ಸರಳ ಬಾಳ್ವೆಯ ಸಾಹುಕಾರ
ಕ್ಷಿಪಣಿ ತಂತ್ರದ ನೇತಾರ
ಎಲ್ಲರೊಲುಮೆಯ ನಿಜ ಹರಿಕಾರ
ಸಂಸ್ಕೃತಿಯ ಬೆಸೆದ ನೇಕಾರ

ಮಳೆಹನಿ

ಆಗಸದಿಂದ ಮಳೆಯದು ಸುರಿದು
ಇಳೆಯನು ತೊಳೆದಿತ್ತು
ಬೆಡಗಿನ ಭೂಮಿಗೆ ಪನ್ನೀರೆರಚಿ
ಕೊಳೆಯನು ಕಳೆದಿತ್ತು

ಕಾಮನಬಿಲ್ಲಿನ ಮೈಯನು ಸವರಿ
ಮಳೆಹನಿ ಇಳಿದಿತ್ತು
ಮಿಂಚಲಿ ಮಿಂದ ರನ್ನದ
ಹರಳಿನ ಅಂದದಿ ಹೊಳೆದಿತ್ತು

ಚಂದದಿ ನಗುವ ಹಸಿರಿನ ಚಿಗುರಿಗೆ
ಮುತ್ತನು ಇಡುತಿತ್ತು
ತನ್ನೊಡಲಿಂದ ಕೋಟಿ ಸೂರ್ಯರ
ಕಾಂತಿಯ ಸೂಸಿತ್ತು

ನೋವನು ಮರೆತ ಹೃದಯವು
ಇಂದು ಸಂತಸ ತಳೆದಿತ್ತು
ನೋಡುತ ನಿಂತ ಮನಸದು
ನಲಿಯುತ ಲೋಕವ ಮರೆತಿತ್ತು

ಬೀರಪ್ಪನ ದಯೆ

ಊರ ಮುಂದಣ ಗುಡಿಯ ಅರಳಿಯ ಮರ ಬೀಸಿ
ಕೇರಿ ಒಳಗೆಲ್ಲ ತಂಗಾಳಿ|| ಸುಳಿದು
ಬೆಂದ ಮನಕೆಲ್ಲ ತಂಪೆರೆದೋ

ಸ್ವಾಮಿ ನಮ್ಮಪ್ಪನ ಕರುಣೆಯ ಕಣ್ಣಿಂದ
ಕಪ್ಪು ಕತ್ತಲೆ ದೂರಾಗಿ|| ಜಗಕೆಲ್ಲ
ಹೊಳಪಿನ ಬೆಳಕು ಇಳಿದಾವೊ

ನೀಲಿ ಆಗಸದಲ್ಲಿ ತೇಲುತ ಸಾಗುವ
ಕಪ್ಪಾನೇ ಮೋಡ ಭುವಿಗಿಳಿದು|| ಧರೆಯ
ಒಪ್ಪ ಓರಣವಾಗಿ ತೊಳೆದಾವೋ

ಬೆಟ್ಟದ ನೀರು ಬರಡಾದ ಭುವಿಗಿಳಿದು
ಊರ ಮುಂದಣ ಕೆರೆತುಂಬಿ|| ಹರಿದು
ನೆಲವೆಲ್ಲ ಹಸಿರುಕ್ಕಿ ನಗುತಾವೆ

ಜೀವ ಕಾಯೂವ ಬೀರಪ್ಪನ ದಯೆಯಿಂದ
ರಗರಗ ಸುಡುವ ಬೇಸಗೆ|| ಸರಿದೋಡಿ
ನಿಗಿಕೆಂಡ ನಗುವ ಹೂವಾದೊ

ವಿರಹ

ದೀಪದ ಎಣ್ಣೆ ತೀರುವಷ್ಟರಲ್ಲಿ
ಒಬ್ಬರ ಮುಖವನ್ನೊಬ್ಬರು ಕಣ್ತುಂಬಿ ಕೊಳ್ಳೋಣ
ತೀರಿದ ನಂತರ ಕಾತರ ತುಂಬಿರುವ
ಮೈ-ಮನಸ್ಸುಗಳ ಸರದಿ

ಮದನನ ಬಾಣದಿರಿತಕ್ಕೆ 
ದಹಿಸುತ್ತಿದೆ ವಿರಹದಗ್ನಿ ಜ್ವಾಲೆ
ಉಪಶಮನಕ್ಕೆ ಈಜಬೇಕಿದೆ
ಶೃಂಗಾರ ಶರಧಿ ನಾವೀಗಲೆ

ಉಸಿರಲೆಗಳಬ್ಬರಕ್ಕೆ ತೊಯ್ದು ತೊಪ್ಪೆ ದೇಹ
ತೇಗುತ್ತಿವೆ ಅಮಲಿಳಿದ ನೇಹ
ಆರಿದ ದೀಪವಿನ್ನೂ ಹಚ್ಚಿಲ್ಲ
ಹಚ್ಚುವ ಮನಸೂ ಇಲ್ಲ

ನೀನಿರದ ಬಾಳು

ಏನಿರಲೇನು ಬದುಕೇ ಬರಡು
ನೀನಿರದ ಈ ಬಾಳಿನಲಿ
ಜಗವೇ ಸೊಗಸು ನೀ
ಕೂಡಲು ನನ್ನ ಒಲುಮೆಯಲಿ

ಎದೆಯ ಕುಲುಮೆ ಕುದಿಯುತಿದೆ
ಭಾವ ಚಿಲುಮೆ ಜಿನುಗಿರಲು
ಉಸಿರೇ ಕೊರಳ ಬಿಗಿಯುತಿದೆ
ನಾನಿರಲು ಏಕಾಂತದೊಳು

ಎಲ್ಲ ಬೇಗೆಯೂ ಮಂಜಿನಿಬ್ಬನಿ
ನೀನಿರೆ ನನ್ನ ಸನಿಹದಲಿ
ಮುತ್ತಿನ ಹನಿಗಳು ಸುರಿದ ಕಂಬನಿ
ನೀ ಸುಳಿಯಲು ಒಮ್ಮೆ ಎದುರಿನಲಿ