ನೀನಿರದ ಬಾಳು

ಏನಿರಲೇನು ಬದುಕೇ ಬರಡು
ನೀನಿರದ ಈ ಬಾಳಿನಲಿ
ಜಗವೇ ಸೊಗಸು ನೀ
ಕೂಡಲು ನನ್ನ ಒಲುಮೆಯಲಿ

ಎದೆಯ ಕುಲುಮೆ ಕುದಿಯುತಿದೆ
ಭಾವ ಚಿಲುಮೆ ಜಿನುಗಿರಲು
ಉಸಿರೇ ಕೊರಳ ಬಿಗಿಯುತಿದೆ
ನಾನಿರಲು ಏಕಾಂತದೊಳು

ಎಲ್ಲ ಬೇಗೆಯೂ ಮಂಜಿನಿಬ್ಬನಿ
ನೀನಿರೆ ನನ್ನ ಸನಿಹದಲಿ
ಮುತ್ತಿನ ಹನಿಗಳು ಸುರಿದ ಕಂಬನಿ
ನೀ ಸುಳಿಯಲು ಒಮ್ಮೆ ಎದುರಿನಲಿ

ಕೆಸರು ಮೆತ್ತಿದ ಕನಸು

ಸುತ್ತುವರಿದಿವೆ ಕೆಸರು ಮೆತ್ತಿಕೊಂಡ ಸಿಹಿ ಕನಸುಗಳು
ಅಂದೊಮ್ಮೆ ತಬ್ಬಿದ್ದವು ಚುಂಬಿಸಿದ್ದವು
ಮಧುರ ಭಾವನೆಗಳ ಹೊಸೆದಿದ್ದವು
ಮುಟ್ಟುವುದಕ್ಕೂ ಅಸಹ್ಯವಾಗಿ ನಿಂತಿವೆ ಇಂದು

ಬರಿದೆ ಗಗನವಾಗಿದ್ದಾಗ
ಸೋನೆ ಸುರಿಸಿ ಕಾಮನಬಿಲ್ಲು ಮೂಡಿಸಿದ್ದವು
ಬಿರುಮಳೆ ಸುರಿಸಿ ತೊಪ್ಪ ತೋಯಿಸಿ
ಕೊಚ್ಚಿಕೊಂಡೊಯ್ಯಲು ಕಾಯುತಿವೆ ಈಗ

ಕಾರ್ಗತ್ತಲ ಬಯಲಲ್ಲಿ ಹೊನ್ಮಿ0ಚು ಮೂಡಿಸಿ
ಚಿತ್ತಾರ ಬರೆದಿದ್ದವು
ಗುಡುಗುಡಿಸಿ ಸಿಡಿಲಬ್ಬರಗೈದು
ಹೊಡೆದುರುಳಿಸಲು ಸಜ್ಜಾಗಿವೆ ಇಂದು

ನಾ ಕಂಡ ಕನಸುಗಳೆಲ್ಲ
ಮತ್ತೊಬ್ಬರ ನನಸಾಗಿ ಅಣಕಿಸುತ್ತಿವೆ
ಶಿಖಂಡಿ ರೂಪಲ್ಲಿ ಹವಣಿಸುತ್ತಿರುವ
ಇವುಗಳೊಂದಿಗೆ ಸೆಣಸಲೂ ಮನವಿಲ್ಲ

ಸೂರಿರದ ಸ್ವಪ್ನಗಳು

ಸೂರಿರದ ಸ್ವಪ್ನಗಳು
ಅಲೆಯುತಿದ್ದವು ದಿಕ್ಕುತಪ್ಪಿ
ಭಾವದ ಸೊಡರಿಡಿದ
ಎದೆಯೊಳಗೆ ಸೇರಿದವು ಆಯತಪ್ಪಿ

ಪ್ರೀತಿ ಪ್ರೇಮಾಭಿಮಾನ ಜಿನುಗುವ
ರೋಮಾಂಚ ತಾಣವದು
ಹೀರಿ ಸವಿಸುಧೆಯ
ಪದವಾಗಿ ಪಡೆದವು ಹೊಸ ರೂಪ

ಪದಮೊಳೆತು ಎದೆಯೊಳಗೆ
ಕೊರಳಿಗೆ ನಿಲುಕಿ
ಉಲಿಯುತಿದೆ ಹೊಸರಾಗ ಗಾನವಾಗಿ
ಬಾಳಿಗೆ ಬೆಳಕಾಗಿ

ಮಂಡ್ಯದ ಕಾಳಮ್ಮ

ಅಂದಾದ ಮಂಡ್ಯಾದ ಚೆಂದಾದ ಬೀದೀಲಿ
ತುಂಬೀದ ಮೆರವಣಿಗೆ ಬರುವಾಗ|| ಊರೊಳಗೆ
ತುಂಬೆ ಹೂವರಳಿ ನಗುತಾವೆ

ಭಾರೀ ರಕ್ಕಸರ ಶಿರಗಳ ಹಾರಿಸಿ
ತೂರಾಡಿ ಕಾಳಮ್ಮ ಬರುವಾಗ|| ಏಳೂರ
ಮಾರೀರು ಅವಳ ಜತೆಯಾದ್ರು

ಅನ್ಯಾಯಕಾರರ ಮೆಟ್ಟಿ ಒಂಟಿಕಾಲಲ್ಲಿ
ಕುಂಟುತ್ತಾ ಕಾಳಮ್ಮ ಬರುವಾಗ|| ನಮ್ಮೂರ
ನಂಟೆಲ್ಲಾ ಒಂದಾದೋ

ಗರತೀರು ಹಿಡಿದ ಆರತಿ ತಂಬಿಟ್ಟೀಗೆ
ಅವರ್ಕೆ ಹೂವು ಕಣ್ಣಾಗಿ|| ತಾವು
ಜಗದ ಸೊಗಸೆಲ್ಲ ನೋಡ್ಯಾವೆ

ಶಿಲಾಬಾಲಿಕೆ

ಅಪ್ಸರೆಯರಂದವನೆ ನಾಚಿಸುತ
ನಿಂತಿಹಳಿಲ್ಲಿ ಶಿಲಾಬಾಲಿಕೆ
ಭಾವ ತುಂಬಿ ನಿಂತಿರುವ ಇವಳೇ
ಶಿಲ್ಪಿಯ ಕನಸಿನ ಕಾವ್ಯಕನ್ನಿಕೆ

ಸೊಡರಿಡಿದ ಕರದೊಳು ಮಿಂಚಿವೆ
ಸ್ವರ್ಣಕಾಂತಿಯ ಕಡಗ ಕೈಬಳೆ
ನಿನ್ನ ಪುತ್ಥಳಿಯೆನಲೇನೇ
ಚೆಲುವ ನಟುವಾಂಗ ಬಾಲೆ

ಕೋಟಿ ಹೂಗಳ ನಗೆಯ ತುಟಿಯಲ್ಲಿ ತುಳುಕಿಸಿ
ಸೆಳೆಯುತಿಹೆ ನಿನ್ನೆಡೆ ಮೋಹದ ಬಲೆ ಬೀಸಿ
ಸೂರೆಗೊಂಡಿಹುದೆನ್ನ ನಿನ್ನೀ ಸೌಂದರ್ಯ ರಾಶಿ
ಎನಿತು ಶ್ರದ್ಧೆಯನೊಹಿಸಿ ಕೆತ್ತಿಹ ಶಿಲ್ಪಿ ಮಯ್ಯೆಲ್ಲಾ ಕಣ್ಣಾಗಿಸಿ

ಆಸೆ

ತಳಿರಿನ ತಂಪಲಿ ಉಳಿಯುವ ಭೃಂಗಕೆ
ಗೆಜ್ಜೆಯ ಕಟ್ಟುವ ಮಹದಾಸೆ
ಹಾರುವ ಚಿಟ್ಟೆಯ ರೆಕ್ಕೆಗೆ
ಬಗೆ ಬಗೆ ಬಣ್ಣವ ಬಳಿವಾಸೆ

ತೇಲುವ ಚಂದ್ರನ ಕಯ್ಯಲಿ ಹಿಡಿದು
ಬಿಂಬವ ಕಾಣುವ ಹಿರಿಯಾಸೆ
ಹೊಳೆಯುವ ರವಿಯ ಹೊನ್ನಿನ ಕಿರಣವ
ಚಿಮ್ಮುತ ಹಾರಿ ಹಿಡಿವಾಸೆ

ಸಾಗರದಂತೆ ಹಬ್ಬಿದ ಕಾನನಕೋಕುಳಿ
ಎರಚಿ ನಲಿವಾಸೆ
ಓಡುವ ಮೋಡದ ಮೇಗಡೆ ಕುಳಿತು
ಲೋಕವ ಸುತ್ತಲು ನನಗಾಸೆ

ಜಿಗಿಯುವ ಜಲಪಾತವ ಸೇರಿ
ಪರ್ವತ ತೊಳೆಯುವ ನವಿರಾಸೆ
ಮುಸುಕಿದ ಮಂಜಲಿ ಕರಗುತ ಇಂದು
ಪ್ರಕೃತಿಯೊಡಲಲಿ ಬೆರೆವಾಸೆ

ಸ್ವರ್ಗ ಸಿಕ್ಕುವಲ್ಗೆ

ಅಕ್ಕಿ ಡಬ್ಬದಲ್ ಔಸಿಟ್ಟವ್ಳೆ
ಅವ್ರವ್ವ್ ಕೊಟ್ಟುದ್ ಕಾಸ
ತಾಳಿ ಕಟ್ಟೀದ್ ಗಂಡ ನಾನು
ಅರವತ್ರುಪಾಯ್ಗೆ ಲೇಸ?

ಕದ್ಬುಡಾದೆ ಎದ್ಬುಡಾದೆ
ಎಲ್ಲಾನೆತ್ಕಂಡ್ ಅಲ್ಲ್ಗೆ
ಮೂರು ಕಾಸು ಆರ್ಕಾಸ್ಗೆಲ್ಲ
ಸ್ವರ್ಗ ಸಿಕ್ಕುವಲ್ಗೆ

ತೂರಾಡ್ಕಂಡು ಹಾರಾಡ್ಕಂಡು
ಬಂದ್‌ಬುಡಾದೆ ಮನ್ಗೆ
ಮಾನ ಮರ್ಯಾದೆಗ್ ಹೆದರ್ಕೊಂಡು
ಉಣ್ಣಾಕಿಕ್ತಾಳ್ ಸುಮ್ಗೆ

ಅತ್ತು ಕರ್ದು ಗೋಳಾಡ್ತಾಳೆ
ಒತ್ತಾರೆದ್ಡು ಗಂಗೆ
ಬೀದಿಗುಂಟ ನಡಡ್ಬುಡಾದೆ
ಏನು ಕೇಳ್ಸ್ಡೆ ಇರೋವಂಗೆ...

ಯೋಧನ ಅಳಲು

ಯುದ್ದದ್ ಕರೆ ಬಂದಿತ್ತಂದು
ಎದ್ದು ನಿಂತಿದ್ದೆ
ಮಲ್ಗಿದ್ ಕಂದನ ಮುಖ ನೋಡಿ
ಹಂಗೆ ಹೊಂಟಿದ್ದೆ

ಗೆದ್ಬಾ ಅಂತ ಆರತಿ ತೆಗೆದು
ಹಣೆತುಂಬ ತಿಲಕ ಇಟ್ಟಿದ್ಲು
ಗುಂಡಿ ಬಿಚ್ಚಿದ್ ಅಂಗಿ ಸರಿಸಿ
ಎದೆಮ್ಯಾಲ್ ಮುತ್ತೊಂದ್ ಒತ್ತಿದ್ಲು

ನಾನ್ ನಿನ್ನೆದೆಯಾಗ್ ಬೆಳಕಾಗಿರ್ತೀನಿ
ಅಂತ ಅಂತಿದ್ಲು
ಹೇಳ್ದೆ ಕೇಳ್ದೆ ದೀಪ ಆರಿಸಿ
ಸುಮ್ನೆ ಹೊಂಟೋದ್ಲು

ಬುಟ್ಟೋಗ್ಬ್ಯಾಡ ನನ್ನ ಅಂತ
ಕಣ್ತುಂಬ ಅತ್ತಿದ್ಲು
ಅವಳಿಲ್ಲದ್ ಮನೆಯೀಗ
ಬರೀ ಕಗ್ಗತ್ಲು

ಸಾವುನ್ ಗೆದ್ದು ನಾನೇ ಬಂದೆ
ಅವಳೇ ಮನೆಲಿಲ್ಲ
ವೈರೀನ್ ಕೊಂದಾಗಿನುತ್ಸಾಹ
ಎದೆಯೊಳಗ್ ಉಳ್ದಿಲ್ಲ

ಬರಿಯ ಬೊಗಸೆ

ನಲ್ಲೇ ನಿನ್ನ ಲಲ್ಲೆ ಮಾತು
ಜಲ್ಲೆ ಕಬ್ಬು ಸಿಗಿದಂಗಿತ್ತು
ಒಲ್ಲೆ ಎಂದರು ನೀಡಿದ ಮುತ್ತು
ಕೆನ್ನೆ ಕೆಂಪು ಮಾಡುತ್ತಿತ್ತು

ನೀ ಒಮ್ಮೆ ಎದೆಗೊರಗೆ
ಬರಿಯೊಲವೆ ಸುರಿಯುತಲಿತ್ತು
ನಿನ್ನ ಮಡಿಲಲ್ಲಿ ತಲೆಯಿಡಲು
ಸ್ವರ್ಗದ ತೊಟ್ಟಿಲಲ್ಲಿ ತೇಲಿದಂತಿತ್ತು

ನನ್ನ ಬೊಗಸೆಯೊಳಗರಳಿದ್ದ ನಿನ್ನ ಮೊಗ
ಮರೆಸುತಿತ್ತು ಈ ಜಗ
ನೀನಿಲ್ಲದೆ ಬರಿದಾದ ಬೊಗಸೆಯ ನೋಡಿ
ತೊರೆಯಬೇಕೆನಿಸಿದೆ ಜಗವನೀಗ

ನಗುತಲಿರು ಹೂವೆ…

ಘಮಘಮಿಸಿ ನಾಚಿನಗುತ ಅರಳಿ ನಿಂತ
ಸುಮವೇ ನಿನಗೆ ಅತಿಥಿಗಳ ಬರವೇ
ಇಬ್ಬನಿಯನೊತ್ತು ನಳನಳಿಸಿ ಮಿಂಚಿರುವ
ಕುಸುಮ ಕನ್ಯೆಗೆ ಬಂಧುಗಳ ಕೊರಗೆ

ಬೇಡಿ ಬರುವುದು ಭ್ರಮರ ನಿನ್ನೊಡಲ ಮಧುವ
ನೀಡುತ್ತ ಸಿಹಿಮುತ್ತು
ಹೊಳೆವ ನೇಸರ ಕಾಣುವ
ತನ್ನ ಕೋಟಿ ಬಿಂಬವ ಇಬ್ಬನಿಯೆದುರು ನಿಂತು

ಮೊಗವರಳಿಸಿ ನಗುವ ತರಳೆ
ಮುಡಿದು ಕುಣಿವಳು ನಿನ್ನೊಡನೆ ನಲಿದು
ಮಿಗಿಲಾಗಿ ನೀ ನಗುತಿರು
ಇರುವುದೆಲ್ಲವ ಮರೆತು ದೇವಮುಡಿಗೊಲಿದು