ಏಕೋ ಏನೋ ಮನೆಯು ಇಂದು ಮೌನ ತಳೆದಿದೆ
ಬೇಸರಿಸಿ ಸೋತ ಮನಕೆ ಮಾತು ಹೊರಳದೇ
ಪ್ರೀತಿ ಪ್ರೇಮ ಆಸೆ ಬಯಕೆ ದೂರ ತೆರಳಿದೆ
ಹೇಗೋ ಏನೋ ಏಕೆ ಹೀಗೆ ಎಂದು ಅರುಹದೇ
ಕೂಡಿ ಕಳೆದ ಘಳಿಗೆ ನಿನಗೆ ನೆನಪು ಬಾರದೆ?
ಪ್ರೀತಿ ಬೆರೆತ ನಾಲ್ಕು ಮಾತ ಮನವು ಬೇಡಿದೆ
ಒಮ್ಮೆ ನಕ್ಕು ನೀನು ನಗೆಯ ತೋರ ಬಾರದೆ
ಬಂದು ಬಳಿಗೆ ಅಪ್ಪು ನನ್ನ ಮುನಿಸ ತೋರದೆ
ನೀನೇ ಜೀವ ನೀನೇ ಭಾವ ನನ್ನ ಬಾಳಿಗೆ
ನೀನೇ ಇರದೆ ನನ್ನಲೀಗ ಏನು ಉಳಿದಿದೆ
ನಿನ್ನ ಹೊರತು ಸ್ವರವೇ ಇಲ್ಲ ನನ್ನ ಕೊರಳಿಗೆ
ನೊಂದ ಮನವು ಬೆಂದು ಇಂದು ಕೂಗಿ ಕರೆದಿದೆ
ಮನದ ತುಂಬ ನಿನ್ನ ಬಿಂಬ ತುಂಬಿ ತುಳುಕಿದೆ
ಕಣ್ಣಂಚಿನ ನೀರ ಹನಿಯು ಕೂಡ ಅದನೆ ಹೇಳಿದೆ
ಹಗುರವಾಗಿ ಒಮ್ಮೆ ನೀನು ನೋಡ ಬಾರದೆ
ಸುಮ್ಮನೇಕೆ ಮೌನವಾದೆ ಏನು ಅರಿಯದೆ?