ಮುಕ್ಕಣ್ಣ ಮುಗಿದಾನು ಮುಕ್ಕೋಟಿ ದೇವರು ಮಣಿದಾರು
ಅಂಥಾ ಚೆಂದುಳ್ಳ ಪ್ರೀತಿ ನಿನದವ್ವ/ ಹಡೆದವ್ವ
ಮುಳ್ಳಿಲ್ಲ ನಿನ್ನ ಮನದೊಳಗೆ//
ಹೊತ್ತು ನರಳಿದೆಯಂತೆ ಅತ್ತು ಹೊರಳಿದೆಯಂತೆ
ಅಜ್ಜಿ ಹೇಳಿದಳು ನೀನುಂಡ ಸಿರಿಬ್ಯಾನಿ/ ನನ್ನವ್ವ
ನನ್ನನೀ ಜಗಕೆ ತರುವಾಗ//
ಕುಡುಗೋಲ ತಂದು ಹೊಕ್ಕಳ ಬಳ್ಳಿಯ ಕುಯ್ದು
ನನ್ನ ಕೊಟ್ಳಂತೆ ಸೂಲಗಿತ್ತಿ ನಿನಕೈಯ್ಗೆ/ ನೋಡಿ
ನನ್ನಮೊಗವ ಮರೆತಂತೆ ನೀನು ಎಲ್ಲ ನೋವ//
ಜನುಮಾವ ಕೊಟ್ಟೆನಗೆ ಪಡೆದು ನೀ ಮರುಹುಟ್ಟು
ಹಡಿಲಿಲ್ಲ ಅಂದು ನೀ ನನ್ನ/ ಬದಲೀಗೆ
ಹಡೆದಂಗಾಯ್ತು ನಾನೇ ನಿನ್ನನಂದು//
ಜೀವದ ಹಂಗಾ ತೊರೆದು ನನಗಿಟ್ಟೆ ಪ್ರಾಣ
ಎಗ್ಗಿಲ್ಲದ ತ್ಯಾಗ ನಿನದೊಂದೇ/ ಜಗದೊಳಗೆ
ಕಯ್ಯೆತ್ತಿ ಮುಗಿವೇನು ನಿನ ಮುಂದೆ//